ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಜಯದೇವ ಆಸ್ಪತ್ರೆಯ ಗಾಜು ಒಡೆದು ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಡಿ.ಜಿ ಹಳ್ಳಿ ಮೂಲದ ವಸೀಮ್ ಪಾಷಾ ಹಾಗೂ ಸೈಯದ್ ಕಾಸೀರ್ ಬಂಧಿತ ಆರೋಪಿಗಳು. ಅನ್ಸರ್ ಪಾಷಾ ಎಂಬುವವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಭಾನುವಾರ ಸಂಜೆ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.
ಈ ವೇಳೆ ಸಂಬಂಧಿಕರಾದ ವಸೀಮ್ ಪಾಷಾ ಹಾಗೂ ಸೈಯದ್ ಕಾಸೀರ್ ಆಸ್ಪತ್ರೆಯಲ್ಲಿ ರೊಚ್ಚಿಗೆದ್ದು, ಇತರ ರೋಗಿಗಳಿಗೆ ತೊಂದರೆ ಮಾಡಿ ಬಾಗಿಲು ಕೊಠಡಿಗೆ ಅಳವಡಿಸಿದ್ದ ಗಾಜು ಪುಡಿ ಪುಡಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯವರು ದೂರು ದಾಖಲಿಸಿದ್ದರಿಂದ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.