ಬೆಂಗಳೂರು: ಮಡಿಕೇರಿ ನಗರದ ಸ್ಟೋನ್ ಹಿಲ್ ಪ್ರದೇಶದಲ್ಲಿ ಅನಧಿಕೃತವಾಗಿ ಹಾಗೂ ಅವೈಜ್ಞಾನಿಕವಾಗಿ ಘನತ್ಯಾಜ್ಯ ಸುರಿಯುತ್ತಿರುವ ಸ್ಥಳೀಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಹೈಕೋರ್ಟ್ಗೆ ಲಿಖಿತ ಹೇಳಿಕೆ ಸಲ್ಲಿಸಿದೆ.
ಅವೈಜ್ಞಾನಿಕ ಕಸ ವಿಲೇವಾರಿ ಪ್ರಶ್ನಿಸಿ ಎಸ್ಆರ್ವಿಕೆ ಹೆಸರಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ವಿವರಿಸಿದರು.
ಇದೇ ವೇಳೆ ಅರ್ಜಿದಾರರ ಪರ ವಕೀಲೆ ಅನುಚೆಂಗಪ್ಪ ವಾದಿಸಿ, ಸ್ಟೋನ್ ಹಿಲ್ ಬೆಟ್ಟದ ನೆತ್ತಿಯ ಮೇಲೆ ಸುರಿದಿರುವ ಕಸದ ರಾಶಿ ಯಾವಾಗ ಬೇಕಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಪ್ರಸ್ತುತ ವಿಪರೀತ ಮಳೆಯಾಗುತ್ತಿದ್ದು, ಸಮೀಪದಲ್ಲೇ ಇರುವ ಜನವಸತಿಗೆ ಅಪಾಯ ಎದುರಾಗಲಿದೆ. ಹೀಗಾಗಿ ತ್ಯಾಜ್ಯ ತೆರವು ಮಾಡಲು ಜಿಲ್ಲಾಡಳಿತ ಮತ್ತು ನಗರಸಭೆಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ಈ ಕುರಿತು ನಗರಸಭೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡಿರುವ ಕುರಿತು ವಿವರಣೆ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ನಗರಸಭೆ ಪರ ವಕೀಲರು, ತಮಗೆ ಈಗಷ್ಟೇ ಮಾಹಿತಿ ಸಿಕ್ಕಿದೆ. ನಗರಸಭೆ ಆಯುಕ್ತರು ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. ಹೀಗಾಗಿ ಹೆಚ್ಚಿನ ಮಾಹಿತಿ ಪಡೆದು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು.