ಬೆಂಗಳೂರು (ಆನೇಕಲ್): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಿಇಟಿಎಲ್ ವತಿಯಿಂದ ನಿರ್ಮಿಸಿರುವ ಅತ್ತಿಬೆಲೆ ಶುಲ್ಕ ವಸೂಲಿ ಕೇಂದ್ರದಲ್ಲಿ ಸ್ಥಳೀಯ ಲಾರಿ ಮತ್ತು ಟಿಪ್ಪರ್ಗಳನ್ನು ಸತಾಯಿಸಿ ಬಿಡಲಾಗುತ್ತಿದೆ ಎಂದು ಕರ್ನಾಟಕ ಟಿಪ್ಪರ್ ಲಾರಿ ಮಾಲೀಕರ ಅಸೋಷಿಯೇಷನ್ ಸಂಘ ಮತ್ತು ಲಾರಿ ಚಾಲಕ - ಮಾಲೀಕರು ಟೋಲ್ ಕಚೇರಿಗೆ ಮುತ್ತಿಗೆ ಹಾಕಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಸ್ಥಳೀಯ ವಾಹನಗಳ ಸೂಕ್ತ ದಾಖಲೆ ಪರಿಶೀಲಿಸಿ ವಿನಾಯಿತಿ ಶುಲ್ಕದಂತೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಎರಡು ತಿಂಗಳಿಂದ ಮತ್ತೆ ವಾಹನಗಳನ್ನು ಗಂಟೆಗಳ ಕಾಲ ನಿಲ್ಲಿಸಿ ಟೋಲ್ ಅಧಿಕಾರಿಗಳ ಮನಸ್ಸಿಗೆ ಬಂದಾಗ ಬಿಡುವ ಪರಿಪಾಠ ಶುರುವಾದ ಬೆನ್ನಲ್ಲಿಯೇ ರೊಚ್ಚಿಗೆದ್ದ ಅಸೊಸಿಯೇಷನ್ ತಂಡ ಅತ್ತಿಬೆಲೆ ಟೋಲ್ ಕಚೇರಿಗೆ ಮುತ್ತಿಗೆ ಹಾಕಿದೆ.
ಈ ಕುರಿತಂತೆ ಟೋಲ್ ಮೇಲಾಧಿಕಾರಿಗಳೊಡನೆ ಮಾತುಕತೆಗೆ ಬರುವ ಸೂಚನೆ ನೀಡಿದರೂ ಬೇಕಂತಲೇ ತಪ್ಪಿಸಿಕೊಂಡಿದ್ದಾರೆಂದು ಲಾರಿ ಮಾಲೀಕರು ದೂರಿದರು. ಈ ಕುರಿತಂತೆ ಮಾತನಾಡಿದ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಾ. ಆರ್ ಪ್ರಭಾಕರ್ ರೆಡ್ಡಿ, ಕಳೆದ ಹತ್ತು ವರುಷಗಳಿಂದ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಗೆ ಎಡತಾಕಿ ಕೊನೆಗೂ ವಿನಾಯಿತಿ ಪಡೆಯಲಾಗಿತ್ತು. ಅದರಂತೆ ಕಳೆದ ಆರು ತಿಂಗಳಿಂದ ಹೊಸೂರು - ಅತ್ತಿಬೆಲೆ ಗಡಿಯಲ್ಲಿನ ಟೋಲ್ನಲ್ಲಿ ಒಂದು ಗಂಟೆ ಲಾರಿಗಳನ್ನು ನಿಲ್ಲಿಸಿ ಅನಂತರ ಅರ್ಧ ತಾಸಿಗೊಮ್ಮೆ ವಾಹನವನ್ನು ಬಿಡುವ ಪರಿಪಾಟವಿತ್ತು.
ತಿಂಗಳ ಕಂತು ಕಟ್ಟಲು ಅಸಾಧ್ಯ: ಆದರೆ, ಎರಡು ತಿಂಗಳಿಂದ ಎರಡು ಗಂಟೆಗಳ ಕಾಲ ಲಾರಿಗಳನ್ನು ಸಾಲಾಗಿ ನಿಲ್ಲಿಸಿ ಸಂಚರಿಸುವ ಆ್ಯಂಬುಲೆನ್ಸ್ಗಳಿಗೂ ದಾರಿ ಕೊಡದಂತೆ ಟೋಲ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಸಾಲ ಪಡೆದಿರುವ ಲಾರಿ ಮಾಲೀಕರಿಗೆ ತಿಂಗಳ ಸಾಲದ ಕಂತು ಕಟ್ಟಲು ಅಸಾಧ್ಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಹಣ ಲೂಟಿ ಮಾಡಲು ಟೋಲ್ಗಳ ಬಳಕೆ: ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಷಿಯೇಷನ್ ಚಾಮರಾಜಪೇಟೆ ಬೆಂಗಳೂರು ಇದರ ಮುಖಂಡ ಚೆನ್ನಾರೆಡ್ಡಿ ಮಾತನಾಡಿ, ಎನ್ಹೆಚ್ಎಎಲ್ ನಿಯಮದಂತೆ ಊರಿಂದ ಆಚೆ ಎರಡು ಕಿ ಮೀ ದೂರದಲ್ಲಿ ಟೋಲ್ ನಿರ್ಮಿಸಬೇಕಿತ್ತು. ಆದರೆ, ಇಲ್ಲಿ ಜಾಗವಿಲ್ಲ ಎಂದು ಅತ್ತಿಬೆಲೆ - ಹೊಸೂರು ಗಡಿಯಲ್ಲಿ ಟೋಲ್ ನಿರ್ಮಿಸಿ ಇಲ್ಲದ ಅನರ್ಥಕ್ಕೆ ಬಿಇಟಿಲ್ ಫ್ಲಾಜಾ ಕಾರಣವಾಗಿದೆ.
ಕಳೆದ ಬಾರಿ ಜಿಲ್ಲಾಧಿಕಾರಿಗಳು ಟೋಲ್ ಅನ್ನು ದ್ವಂಸಗೊಳಿಸಿ ಸ್ಥಳೀಯ ವಾಹನಗಳಿಗೆ ಸೇವಾರಸ್ತೆ ನಿರ್ಮಿಸಿ ವಾಹನ ಚಾಲನೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇತ್ತೀಚೆಗೆ ಜನರ ಹಣ ಲೂಟಿ ಮಾಡಲು ಟೋಲ್ಗಳು ಬಳಕೆಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಇಟಿಎಲ್ ಏನು ಆದೇಶ ಹೊರಡಿಸುತ್ತದೆಯೋ ಅದರ ಪಾಲನೆಯನ್ನಷ್ಟೇ ನಾವು ಮಾಡುತ್ತೇವೆ ಎಂದು ಸಿದ್ದ ಉತ್ತರವನ್ನು ಅತ್ತಿಬೆಲೆ ಟೋಲ್ ಅಧಿಕಾರಿಗಳು ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಅಣ್ಣಯ್ಯರೆಡ್ಡಿ ತಿಳಿಸುತ್ತಾರೆ. ಮುಂದುವರೆದು ಅಂತಹ ಆದೇಶವಿದ್ದರೆ ನಮಗೆ ನೀಡಿ ಒಮ್ಮೆ ಪರಿಶೀಲಿಸುತ್ತೇವೆ ಎಂದು ಕೇಳಿದರೂ 2 ತಿಂಗಳಿಂದ ಈವರೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಲಾರಿ ಟಿಪ್ಪರ್ಗಳ ಚಾಲನೆಗೆ ಅವಕಾಶ: ಇನ್ನು ಬಿಇಟಿಎಲ್ ಮ್ಯಾನೇಜರ್ ತಿಮ್ಮಯ್ಯ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು ಅನಂತರ ಉತ್ತರಿಸುವ ಭರವಸೆ ನೀಡಿ ನುಣುಚಿಕೊಂಡರು. ಲಾರಿ ಚಾಲಕರು ಮಾಲೀಕರ ತಂಡ ಅತ್ತಿಬೆಲೆ ಕಚೇರಿಗೆ ಮುತ್ತಿಗೆ ಹಾಕಿದ ಬೆನ್ನಲ್ಲೇ ಮುಂದಿನ ಸಭೆ ನಡೆಯುವವರೆಗೆ ಸ್ಥಳೀಯ ಲಾರಿ ಟಿಪ್ಪರ್ಗಳ ಚಾಲನೆಗೆ ಅವಕಾಶ ನೀಡಲಾಗುವ ಭರವಸೆಯನ್ನು ಮತ್ತೊಬ್ಬ ಮ್ಯಾನೇಜರ್ ಯಲ್ಲಪ್ಪ ನೀಡದ ಬಳಿಕ ಮುತ್ತಿಗೆಯ ಬಿಸಿ ತಣ್ಣಗಾಯಿತು.
ಮುತ್ತಿಗೆ ಕಾರ್ಯಕ್ರಮದಲ್ಲಿ ಜಯಕರ್ನಾಟಕದ ಕಿರಣ್ ಪ್ರಬಾಕರ ರೆಡ್ಡಿ, ಸಮೀರ್ ಮತ್ತಿತರರು ಭಾಗವಹಿಸಿದ್ದರು.
ಓದಿ: ಚಾಮರಾಜನಗರ: ದುಡ್ಡಿನಾಸೆಗೆ ಮಗು ಮಾರಿದ ತಂದೆ, ಕಂದನಿಗಾಗಿ ತಾಯಿ ಹಂಬಲ