ಬೆಂಗಳೂರು: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಅವಕಾಶ ಕಲ್ಪಿಸಿ ರೂಪಿಸಲಾಗಿದ್ದ ಕರ್ನಾಟಕದ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ನಲ್ಲಿ ವಾಪಸ್ ಪಡೆಯಲಾಯಿತು.
ವಿಧಾನ ಪರಿಷತ್ ಕಲಾಪದಲ್ಲಿ ಆರ್ಥಿಕ ಬಿಲ್ ಮಂಡಿಸುವುದಾಗಿ ಹೇಳಿ ಎದ್ದುನಿಂತ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ವಿಶ್ವವಿದ್ಯಾಲಯ ವಿಧೇಯಕ 2020 ಅನ್ನು ವಾಪಸ್ ಪಡೆಯುವ ನಿರ್ಣಯವನ್ನು ಮಂಡಿಸಿದರು. ಹೆಚ್ಚುವರಿ ಸೌಕರ್ಯ, ಸಿಬ್ಬಂದಿ ನೇಮಕದಿಂದ ಆರ್ಥಿಕ ಹೊರೆಯಾಗಲಿದೆ ಎನ್ನುವ ಕಾರಣವನ್ನು ಮುಂದಿಟ್ಟು ವಿಧೇಯಕವನ್ನು ವಾಪಸ್ ಪಡೆಯುವುದಕ್ಕೆ ಸದನದ ಅನುಮತಿ ಕೋರಿದರು.
ಆರ್ಥಿಕ ಬಿಲ್ ಮಂಡಿಸುವುದಾಗಿ ಹೇಳಿ ಬೇರೊಂದು ವಿಧೇಯಕ ವಾಪಸ್ ಪಡೆಯುವ ಪ್ರಸ್ತಾಪ ಮಾಡುತ್ತಿದ್ದೀರಲ್ಲ ಎಂದು ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಂತರ ಬಿಲ್ ಪಾಸ್ ಮಾಡಲು ಚರ್ಚೆ ಅಗತ್ಯವಿದೆ. ವಾಪಸ್ ಪಡೆಯುತ್ತಿದ್ದೇವೆ. ಅಷ್ಟೇ ಇದರಲ್ಲಿ ಸಮಸ್ಯೆ ಏನಿದೆ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು. ನಂತರ ಧ್ವನಿಮತದ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ವಿಧೇಯಕ 2020 ವಾಪಸ್ ಪಡೆಯುವ ನಿರ್ಣಯವನ್ನು ವಿಧಾನ ಪರಿಷತ್ ಅಂಗೀಕರಿಸಿತು.