ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕರಾಗಲು ಬಯಸುವವರು ಉತ್ತಮ ನಾಯಕತ್ವದ ಗುಣ ಹೊಂದಿರಬೇಕು. ಈ ನಾಯಕತ್ವದ ಗುಣ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ವಿಶ್ವಾಸಾರ್ಹತೆ ಕಾಯ್ದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ತಿಳಿಸಿದರು.
ನಗರದ ಉನ್ನತ ಶಿಕ್ಷಣ ಪರಿಷತ್ನಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಉನ್ನತ ಶಿಕ್ಷಣ ಮಂಡಳಿ ಆಯೋಜಿಸಿದ್ದ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಾಮಕಾರಿ ಆಡಳಿತ ಹಾಗೂ ನಾಯಕತ್ವ ಕುರಿತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕರಾಗಲು ಬಯಸುವವರು ಮುಖ್ಯವಾಗಿ ಉತ್ತಮ ಸಂವಹನ ಕಲೆ ಹೊಂದಿರಬೇಕು. ನಮ್ಮ ಆಲೋಚನೆಯನ್ನು ಸ್ಪಷ್ಟವಾಗಿ ಹಂಚಿಕೊಂಡಾಗ ಮಾತ್ರ ಯೋಜನೆಗಳ ಸರಿಯಾದ ಅನುಷ್ಠಾನ ಸಾಧ್ಯ. ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಮೂಲಕ ವಿಶ್ವವಿದ್ಯಾಲಯಗಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಲ್ಲವು ಎಂದು ಸಲಹೆ ನೀಡಿದರು.
ಉನ್ನತ ಶಿಕ್ಷಣ ಸಂಬಂಧ ಎಲ್ಲಾ ಯೋಜನೆಗಳು ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಹೊರತು, ಆಡಳಿತಾತ್ಮಕ ದೃಷ್ಟಿಯಿಂದ ಇರಬಾರದು. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಮಾತ್ರ ಧ್ಯೇಯೋದ್ದೇಶಗಳು ಈಡೇರಲು ಸಾಧ್ಯ, ಇಲ್ಲದಿದ್ದರೆ ಅದು ಕೇವಲ ಯೋಜನೆಯಾಗಿಯೇ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಯೋಜನೆಯೂ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು, ಪರಿಣಾಮಕಾರಿ ಆಡಳಿತ ನೀಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಲವು ಸಂಸ್ಥೆಗಳ ಜತೆ ಕೆಲಸ ಮಾಡುತ್ತಿದ್ದು, ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ, ಜೊತೆಗೆ ಸಂಬಂಧಪಟ್ಟ ಎಲ್ಲರ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿದೆ ಎಂದು ವಿವರಿಸಿದರು.