ಬೆಂಗಳೂರು: ದಲಿತ ಮತ್ತು ಹಿಂದುಳಿದ ಜಾತಿ, ಸಮುದಾಯಗಳ ಸ್ವಾಮೀಜಿಗಳ ನಿಯೋಗ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು. ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು, ಅವರಿಗೆ ಹಲವು ಮಠಾಧೀಶರು ಸಾಥ್ ನೀಡಿದರು.
ಒಕ್ಕೂಟದ ಸಂಚಾಲಕ ಭೋವಿಗುರುಪೀಠ ಚಿತ್ರದುರ್ಗ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕಾರ್ಯದರ್ಶಿ ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಡಾ.ಶ್ರೀ ಶಾಂತವೀರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀ ಗುರುಪೀಠ ಚಿತ್ರದುರ್ಗ, ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಹರಿಹರ, ಈಶ್ವರಾನಂದಪುರಿ ಸ್ವಾಮೀಜಿ ಶಾಖಾಮಠ ಹೊಸದುರ್ಗ, ರೇಣುಕಾನಂದ ಸ್ವಾಮೀಜಿ ನಾರಾಯಣ ಗುರುಪೀಠ ಶಿವಮೊಗ್ಗ, ಬಸವ ಮಾಚಿದೇವ ಸ್ವಾಮೀಜಿ ಮಡಿವಾಳ ಗುರುಪೀಠ ಚಿತ್ರದುರ್ಗ, ಬಸವಕೂಮರ ಸ್ವಾಮೀಜಿ ಗಾಣಿಗ ಗುರುಪೀಠ ವಿಜಯಪುರ, ಜಗದ್ಗುರು ನಾಗಿದೇವ ಸ್ವಾಮೀಜಿ ಚಲವಾದಿ ಗುರುಪೀಠ ಚಿತ್ರದುರ್ಗ, ಶಾಂತಭಿಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ ಶಿವಶರಣ ಅಂಬಿಗರ ಚೌಡಯ್ಯ ಗುರುಪೀಠ ಹಾವೇರಿ, ಕುಂಬಾರ ಗುಂಡಯ್ಯ ಸ್ವಾಮೀಜಿ ಕುಂಬಾರ ಗುರುಪೀಠ ತೆಲಸಂಗ, ಕೃಷ್ಣ ಯಾದವಾನಂದ ಸ್ವಾಮೀಜಿ ಯಾದವ ಮಹಾಸಂಸ್ಥಾನ ಚಿತ್ರದುರ್ಗ, ಇಮ್ಮಡಿ ಕೇತೇಶ್ವರ ಸ್ವಾಮೀಜಿ ಮೇದಾರ ಕೇತೇಶ್ವರ ಗುರುಪೀಠ ಚಿತ್ರದುರ್ಗ, ತ್ರಿದಂಡಿ ವೇಂಕಟ ರಾಮಾನುಜ ಜೀಯರ್ ಸ್ವಾಮೀಜಿ ರಾಮಾನುಜ ಮಠ ಬೆಂಗಳೂರು ಇದ್ದರು.
ಮರು ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಹಿಂದುಳಿದ, ದಲಿತ ಮಠಾಧೀಶ್ವರರ ಒಕ್ಕೂಟ, ಚಿತ್ರದುರ್ಗ ಈ ಹಿಂದೆ ಆಗ್ರಹಿಸಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸೂಚಿಸಿದ್ದ ಒಕ್ಕೂಟ ಮರು ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕಗಳಲ್ಲಿರುವ ಲೋಪಗಳ ಬಗ್ಗೆ ಪತ್ರದಲ್ಲಿ ವಿವರಿಸಿತ್ತು. ಆದರೆ ಹಿಂದಿನ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು ಸರ್ಕಾರ ಪಠ್ಯ ಬದಲಿಸುವ ಮಾತನಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಇಂದಿನ ಭೇಟಿ ಸಂದರ್ಭ ಸಿದ್ದರಾಮಯ್ಯ ಅವರಿಗೆ ಇದೇ ವಿಚಾರವನ್ನು ಗಮನಿಸುವಂತೆ ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿನ ದಲಿತ ಮತ್ತು ಹಿಂದುಳಿದ ಮಠಗಳಿಗೆ ಬೆಂಗಳೂರಿನಲ್ಲಿ 5 ಎಕರೆ ಜಮೀನು ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ 5 ಕೋಟಿ ರೂ.ಅನುದಾನ ನೀಡಬೇಕು" ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸುವಂತೆ ಒತ್ತಾಯಿಸಿ ಹಿಂದುಳಿದ-ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತ್ತು. ಆದರೆ ಈ ವಿಚಾರಕ್ಕೂ ಹಿಂದಿನ ಸರ್ಕಾರ ಸಮ್ಮತಿ ನೀಡಿರಲಿಲ್ಲ. ಇಂದು ಇದೇ ಪ್ರಸ್ತಾಪವನ್ನು ಸಿಎಂ ಮುಂದಿಡಲಾಯಿತು.
ಜನತಾ ದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಹಲವು ಗಣ್ಯರು ಭೇಟಿ ನೀಡಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಈ ಮೂವರಲ್ಲಿ ಒಬ್ಬರು ಸಿಎಂ: ಭವಿಷ್ಯ ನುಡಿದ ಶಾಸಕ ಪ್ರದೀಪ್ ಈಶ್ವರ್