ಬೆಂಗಳೂರು : ರೈತರಿಗೆ ಬೇಕಾಗುವಷ್ಟು ಗೊಬ್ಬರ ನೀಡಲಾಗಿದೆ. ಕಳೆದ 5 ವರ್ಷದಿಂದ ದೇಶದಲ್ಲಿ ಎಲ್ಲಿಯೂ ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಂಡಿದ್ದೇವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿಎಪಿ ಗೊಬ್ಬರ ದರದಲ್ಲಿ ಸಾಕಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದ್ದರೂ ಸರ್ಕಾರ ದರ ಏರಿಕೆ ಮಾಡಿಲ್ಲ. ರೈತರಿಗೆ ಹೊರೆಯಾಗದಂತೆ 1,200 ರೂ.ಗೆ ಡಿಎಪಿ ಗೊಬ್ಬರ ಒದಗಿಸುತ್ತಿದ್ದೇವೆ. ಇದರಿಂದ ಸುಮಾರು 35 ಸಾವಿರ ಕೋಟಿ ರೂ. ಹೊರೆ ಕೇಂದ್ರ ಸರ್ಕಾರಕ್ಕೆ ಆಗಿದೆ. ಆದರೂ, ರೈತರಿಗೆ ದರ ಏರಿಕೆ ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರಿಂದ ಸುಳ್ಳು ಸೃಷ್ಟಿ: ಗೊಬ್ಬರ ಹಾಗೂ ಅತಿವೃಷ್ಟಿ ಕೊರತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿಯೇ, ನಾನು ಸುದ್ದಿಗೋಷ್ಟಿ ಕರೆದಿದ್ದೇನೆ ಎಂದು ತಿಳಿಸಿದರು.
ರೈತರ ಮೇಲೆ ಗೋಲಿಬಾರ್ ಆಗಿರುವುದನ್ನು ಮತ್ತೆ ಸಿದ್ದರಾಮಯ್ಯ ಅವರು ನೆನಪಿಸಿರುವುದು ದುರ್ದೈವ. ರೈತರಿಗೆ ಅನೇಕ ಸುಧಾರಣೆ ಮಾಡುವುದು ನಮ್ಮ ಕರ್ತವ್ಯ. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಗೊಬ್ಬರ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಯಾವ ಅಂಕಿ-ಅಂಶ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಯಾರು ಈ ರೀತಿ ಮಾಹಿತಿ ಕೊಟ್ಟರೋ ಅವರೇ ಹೇಳಬೇಕು. ನಮ್ಮ ಬಳಿ ಸರಿಯಾದ ಅಂಕಿ ಅಂಶ ಇದೆ. ಹಾಗಾಗಿ, ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಅವರಿಗೆ ನೆನಪು ಮಾಡುತ್ತೇನೆ. 2008ರಲ್ಲಿ ಕೇಂದ್ರದಲ್ಲಿ ಬೇಜವಾಬ್ದಾರಿ ಸರ್ಕಾರ ಇತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ರೈತರಿಗೆ ಭಯ, ಆತಂಕ ಹುಟ್ಟಿಸುವುದು ಶೋಭೆ ತರುವುದಿಲ್ಲ. ನಾವು ಇಷ್ಟು ತಿಳಿದಷ್ಟು ಅವರಿಗೆ ತಿಳಿಯಲು ಆಗಲ್ಲ. ಇವರ ಈ ಹೇಳಿಕೆಯಿಂದ ದುಷ್ಪರಿಣಾಮ ಆಗಲಿದೆ ಎಂದು ತಿಳಿಸಿದರು.
ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಗೊಬ್ಬರ ಖರೀದಿಗೆ ಕ್ರಮ ಕೈಗೊಳ್ಳುತ್ತೇವೆ. ಮಧ್ಯವರ್ತಿಗಳ ಹಾವಳಿಯಿಂದ ಅಭಾವ ಸೃಷ್ಟಿಯಾಗುತ್ತಿದೆ. ಉಪ ಚುನಾವಣೆ ತಲೆಯಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಸೋಲಿನ ಭೀತಿ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಗೊಬ್ಬರ ಇದೆ, ಆತಂಕ ಬೇಡ: ನವೆಂಬರ್ ತಿಂಗಳಿಗೂ ಕೂಡ ಬೇಕಾಗುವಷ್ಟು ಗೊಬ್ಬರ ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚೇ ಗೊಬ್ಬರ ರಾಜ್ಯದಲ್ಲಿ ಇದೆ.
ಮೈಸೂರು, ಹಾಸನ, ಕೊಡಗಿನಲ್ಲಿ ಗೊಬ್ಬರ ಕೊರತೆ ಕಂಡು ಬಂದಿದೆ ಎಂದಿದ್ದಾರೆ. ಇಲ್ಲಿಗೆ ದಾಸ್ತಾನು ಆಗೋದು ತಡವಾಗಿದ್ದರಿಂದ ಸಮಸ್ಯೆ ಆಗಿದೆ. ಆದರೆ, ಅಧಿಕಾರಿಗಳಿಗೆ ಹೇಳಿದ್ದೇನೆ. ಎರಡು ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ 26,47,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ನ ರಸಗೊಬ್ಬರಕ್ಕೆ ಬೇಡಿಕೆಯಿರುವುದನ್ನು ಯಾವುದೇ ಕೊರತೆಯಿಲ್ಲದೆ ಪೂರೈಸಲಾಗಿದೆ. ಆರಂಭಿಕ ಶುಲ್ಕ(11,54,320 ಮೆ.ಟ) ಹಾಗೂ 24 ಲಕ್ಷ ಮೆಟ್ರಿಕ್ ಟನ್ ಸರಬರಾಜು ಒಳಗೊಂಡಂತೆ ಒಟ್ಟು 35,63,000 ಮೆ. ಟನ್ ವಿವಿಧ ರಸಗೊಬ್ಬರ ಮುಂಗಾರಿನಲ್ಲಿ ಪೂರೈಸಲಾಗಿದೆ.
ಮುಂಗಾರಿನಲ್ಲಿ 28,54,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ನ ರಸಗೊಬ್ಬರ ಮಾರಾಟವಾಗಿದೆ. ಪೂರೈಕೆಯ ಬಳಿಕವೂ ಸೆಪ್ಟೆಂಬರ್ 2021 ಅಂತ್ಯಕ್ಕೆ ಸೆಪ್ಟೆಂಬರ್ 2021 ರ ಅಂತ್ಯದವರೆಗೆ 7,08, 850 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ಈ ದಾಸ್ತಾನನ್ನು ಹಿಂಗಾರಿಗೂ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. 78.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಗೆ ಅವಶ್ಯವಿರುವ ಪರಿಕರಗಳ ಸರಬರಾಜನ್ನು ರಾಜ್ಯದಿಂದ ಸಮರ್ಪಕವಾಗಿ ಮಾಡಲಾಗಿದೆ. ರಸಗೊಬ್ಬರಗಳನ್ನು ಕೇಂದ್ರ ಸರ್ಕಾರದ ಹಂಚಿಕೆಯಂತೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
2021-22ರ ಸಾಲಿನ ಹಿಂಗಾರು/ಬೇಸಿಗೆ ಹಂಗಾಮಿಗೆ (ಅಕ್ಟೋಬರ್ 2021 ರಿಂದ ಮಾರ್ಚ್ 2022ರವರೆಗೆ) 16.94 ಲಕ್ಷ ಮೆ.ಟನ್ (ಯೂರಿಯಾ 6.50 ಲಕ್ಷ ಮೆ.ಟನ್, ಡಿ.ಎ.ಪಿ -2.10 ಲಕ್ಷ ಮೆ.ಟನ್, ಎಮ್.ಒ. ಪಿ - 1.17 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 7.17 ಲಕ್ಷ ಮೆ.ಟನ್) ಪ್ರಮಾಣದ ವಿವಿಧ ಗ್ರೇಡ್ಗಳ ರಸಗೊಬ್ಬರದ ಬೇಡಿಕೆ ಇದೆ.
2021-22ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 28.00 ಲಕ್ಷ ಹೆಕ್ಟೇರ್ಗೆ ಪ್ರತಿಯಾಗಿ ದಿನಾಂಕ 26.10.2021ರ ಅಂತ್ಯಕ್ಕೆ 5.02 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ (ಶೇ.18%). ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಮಳೆ ಪುಮಾಣವು ಹೆಚ್ಚಾಗಿರುವ ಹಿನ್ನೆಲೆ ಬಿತ್ತನೆ ಕಾರ್ಯ ಕುಂಠಿತವಾಗಿದೆ.
2021-22ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5,00 ಲಕ್ಷ ಹೆಕ್ಟೇರ್ ಹೊಂದಲಾಗಿದೆ. ನೇರ ರಸಗೊಬ್ಬರದ ಬದಲಿಗೆ ಕಾಂಪ್ಲೆಕ್ಸ್ ರಸಗೊಬ್ಬರದಲ್ಲಿ ಸಮತೋಲಿತ ಪೋಷಕಾಂಶಗಳೊಂದಿಗೆ ತ್ವರಿತವಾಗಿ ಬೆಳೆಗಳಿಗೆ ಲಭ್ಯವಾಗುವ ಕಾರಣ ಪ್ರಸ್ತುತ ನೇರ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಕೆ ಮಾಡಲು ರೈತರಿಗೆ ಪ್ರೋತ್ಸಾಹಿಸಲಾಗಿದೆ. ಈ ಕುರಿತು ರೈತರಿಗೂ ಮನವರಿಕೆ ಮಾಡಲಾಗಿದೆ ಎಂದು ವಿವರಿಸಿದರು.
ನೆಲಮಂಗಲ, ಮಂಡ್ಯ, ಕೋಲಾರ ಮೂರು ಕಡೆ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆದಿದೆ. ರೈತರಿಗೆ ತಪ್ಪು ಮಾಹಿತಿಯಿಂದ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದವರು ನಂತರ ದಿನ ನಮ್ಮ ಬಳಿ ಬಂದಿದ್ದರು. ಆಗ ನಾನು ಅವರಿಗೆ ಸರಿಯಾದ ಮಾಹಿತಿ ನೀಡಿದೆ. ಇದು ಕಾಂಗ್ರೆಸ್ ರಾಜಕೀಯವಾಗಿ ಮಾಡುತ್ತಿದೆ ಎಂದು ದೂರಿದರು.
ಜನ ಆಕ್ರೋಶದಲ್ಲಿ ಇಲ್ಲ : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಸಂಬಂಧ ಜನ ಆಕ್ರೋಶದಲ್ಲಿ ಇಲ್ಲ ಎಂದು ಉಡಾಫೆ ಉತ್ತರ ಕೊಟ್ಟ ಅವರು, ನನ್ನ ಇಲಾಖೆಯ ಪ್ರಶ್ನೆ ಕೇಳಿ ಎಂದರು.
ಲಿಕ್ವೀಡ್ ನ್ಯಾನೋ ಡಿಎಪಿ : ಮುಂದಿನ ವರ್ಷ ಲಿಕ್ವಿಡ್ ನ್ಯಾನೋ ಡಿಎಪಿ ತಯಾರಾಗುತ್ತಿದೆ. ಅನೇಕ ಕ್ರಾಂತಿಕಾರಿ ಹೆಜ್ಜೆಗಳನ್ನು ಜೂನ್ ನಲ್ಲಿ ಇಡಲಾಗುತ್ತಿದೆ.
ಇಂಟರ್ ನ್ಯಾಷನಲ್ ಮಾರ್ಕೆಟ್ನಲ್ಲಿ ತೈಲ ಬೆಲೆಗಳು ಹೆಚ್ಚಾಗಿದೆ. ಯುಪಿಎ ಮಾಡಿದ್ದ ಆಯಿಲ್ ಬಾಂಡ್ ಸಾಲವನ್ನು ನಮ್ಮ ಸರ್ಕಾರ ತೀರಿಸಿದೆ. ಹಣದುಬ್ಬರ ಕೂಡ ಇದೆ ಎಂದು ತಿಳಿಸಿದರು.
ಹಣದುಬ್ಬರ ಎಷ್ಟು ಹೆಚ್ಚಾಗಿದೆ ಅನ್ನೋದನ್ನು ತಿಳಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಸಚಿವರು, ಕಾಂಗ್ರೆಸ್ ಗೆ ಮಾತ್ರ ಬೆಲೆ ಏರಿಕೆ ಬಗ್ಗೆ ಆಕ್ರೋಶವಿದೆ. ಜನರಿಗೆ ಬೆಲೆ ಏರಿಕೆ ಕುರಿತು ಆಕ್ರೋಶ ಇಲ್ಲ ಎಂದು ಹೇಳಿದರು.
ಓದಿ: ಬಹಿಷ್ಕಾರ ಪ್ರಕರಣ : ಮಾಧ್ಯಮಗಳ ಮುಂದೆ ಹೋಗಿದ್ದಕ್ಕೆ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪ