ಬೆಂಗಳೂರು : ರಾಜ್ಯದಲ್ಲಿ ಅಕಾಲಿಕ ಮಳೆ ಬೀಳುತ್ತಿದ್ದು, ಹಲವಾರು ಜಿಲ್ಲೆಯ ರೈತರ ಬೆಳೆಗಳು ಮಳೆಗೆ ನಾಶವಾಗುತ್ತಿವೆ. ಹುಬ್ಬಳ್ಳಿ,ತುಮಕೂರು, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಕಾರವಾರ ಹಾಗೂ ಹಾವೇರಿ ಸೇರಿ ನಾನಾ ಕಡೆ ಮಳೆಯಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ಸಾಕಷ್ಟು ಅವಾಂತರ ಉಂಟಾಗಿದೆ. ಪಟ್ಟು ಬಿಡದೆ ಒಂದು ಗಂಟೆಗೆ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಗಳೆಲ್ಲ ನದಿಗಳಂತೆ ಮಾರ್ಪಾಡಾಗಿದ್ದವು. ಇನ್ನು, ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗಿದ್ರೆ, ಆನಂದ ನಗರ ಬಳಿಯ ಗಣೇಶ ನಗರದ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
ಹಾಗೆ ತುಮಕೂರು ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಾಗುತ್ತಿದ್ದಂತೆ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ದಿಢೀರನೆ ಮಳೆಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು.
ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕೆರೆ, ಗುಬ್ಬಿ, ತುಮಕೂರು ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಕಳೆದ ಒಂದು ವಾರದಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದ ರೈತಾಪಿ ವರ್ಗಕ್ಕೆ ಸಂತಸ ತಂದಿದೆ.
ಶಿವಮೊಗ್ಗದಲ್ಲೂ ಅಕಾಲಿಕ ಮಳೆ ಮುಂದುವರೆದಿದೆ. ಇಂದು ಸಂಜೆಯಿಂದಲೇ ಮಳೆ ಆರಂಭವಾಗಿದೆ. ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಹಲವೆಡೆ ಮಳೆಯಾಗುತ್ತಿದೆ. ಕಾರವಾರದಲ್ಲೂ ಬಿರು ಬೇಸಿಗೆ ನಡುವೆಯೂ ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಯಲ್ಲಾಪುರದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಏಕಾಏಕಿ ಮೋಡ ಕವಿದು ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಅನಿರೀಕ್ಷಿತ ಮಳೆಯಿಂದಾಗಿ ಪಟ್ಟಣದಲ್ಲಿ ವ್ಯಾಪಾರಸ್ಥರು ಸಮಸ್ಯೆ ಅನುಭವಿಸುವಂತಾಯಿತು. ಗ್ರಾಮೀಣ ಭಾಗದಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರಗಳಲ್ಲಿ ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಭತ್ತ ಹಾಗೂ ಅಡಿಕೆ ಕೊಯ್ಲಿನಲ್ಲಿ ನಿರತರಾಗಿದ್ದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಯಿತು.
ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆಯಿಂದ ಮೋಡ ಕವಿತ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ರೈತ ಸಂಕುಲ ಆತಂಕಕ್ಕೆ ಈಡಾಗಿದೆ. ಈ ವಾತಾವರಣದಿಂದ ಹುಳಿಗಡಲೆ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹುಳಿಗಡಲಿ ಬೆಳೆಯಲಾಗಿದೆ.
ಈಗ ಹೂವು, ಕಾಯಿ ಕಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಬೆಳೆ ಕುಂಠಿತವಾಗುತ್ತದೆ. ಅಲ್ಲದೆ ಬೆಳೆಗೆ ಕೀಟಬಾಧೆ ಹೆಚ್ಚಾಗುತ್ತದೆ. ಹಾವೇರಿ ಜಿಲ್ಲೆಯ ವಿವಿಧಡೆ ಮಳೆಯಾಗಿದೆ. ಹಾವೇರಿನಗರ ಸೇರಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಹಾವೇರಿ ತಾಲೂಕಿನ ನಾಗನೂರು ಹಾನಗಲ್ ತಾಲೂಕಿನ ಕೂಡಲದಲ್ಲಿ ಮಳೆ ಸುರಿದಿದ್ದು, ಅನ್ನದಾತ ಆತಂಕಕ್ಕೀಡಾಗಿದ್ದಾನೆ.
ಕೈಗೆ ಬಂದ ಬೆಳೆ ಹಾಳಾಗುವ ಆತಂಕವನ್ನ ರೈತರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೆಲ ರೈತರಿಗೆ ಸಂತಸವಾದ್ರೇ, ಮತ್ತೆ ಕೆಲವೊಂದಿಷ್ಟು ಅನ್ನದಾತರಿಗೆ ಈ ಅಕಾಲಿಕೆ ಮಳೆ ಸಂಕಟ ತಂದೊಡ್ಡಿದೆ.