ಬೆಂಗಳೂರು: ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೂಢೀಕರಣಗಳ ಅಧ್ಯಯನ ಸಮಿತಿಯೊಂದಿಗೆ ಇಂದು ಸಿಎಂ ಸಭೆ ನಡೆಸಿದರು. ಆದರೆ ಈ ಸಭೆಗೆ ಸಾರಿಗೆ ಸಚಿವವರೇ ಗೈರಾಗಿದ್ದರು. ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ವರದಿ ನೀಡಲು, ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು.
ಹೀಗಾಗಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಯ್ತು. ಈ ವೇಳೆ ಸಮಿತಿ ಅಧ್ಯಕ್ಷ ಎಂ. ಆರ್. ಶ್ರೀನಿವಾಸ ಮೂರ್ತಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆಎಸ್ಆರ್ಟಿಸಿ ಎಂ.ಡಿ ಶಿವಯೋಗಿ ಕಳಸದ್, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಆದರೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಚಿವರೇ ಸಭೆಯಲ್ಲಿ ಇರಲಿಲ್ಲ.
ಇದನ್ನೂ ಓದಿ: ಕೊರೊನಾಗೆ ಜನ ತತ್ತರ.. ರಾಜ್ಯದಲ್ಲಿಂದು ಕೋವಿಡ್ನಿಂದ 81 ಮಂದಿ ಸಾವು!
ಮಧ್ಯಂತರ ವರದಿ ಸಲ್ಲಿಕೆ: ಸಭೆಯಲ್ಲಿ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ವೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಸಂಸ್ಥೆಗಳ ಪುನಶ್ವೇತನಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹಾಗೂ ನಿರೀಕ್ಷೆಗಳನ್ನು ಹಂಚಿಕೊಂಡ ಸಿಎಂ, ಈ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ, ಅವುಗಳ ದಕ್ಷ ಬಳಕೆಗೆ ಮಾರ್ಗೋಪಾಯಗಳನ್ನು ಶಿಫಾರಸು ಮಾಡುವಂತೆ ತಿಳಿಸಿದರು. ಸಾರಿಗೆ ಸಂಸ್ಥೆಗಳ ಆಸ್ತಿಗಳಿಂದ ಆದಾಯೋತ್ಪನ್ನ, ಸಂಸ್ಥೆಯ ವರ್ಕ್ ಶಾಪ್ಗಳ ಸದ್ಬಳಕೆ, ಮಾನವ ಸಂಪನ್ಮೂಲದ ಸದ್ಬಳಕೆ, ಸಂಸ್ಥೆಗಳ ಸೇವೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಬಳಕೆ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ