ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಉಮೇಶ್ ಕತ್ತಿ ನಿನ್ನೆ ಸಂಜೆಯಿಂದ ಬಿಜೆಪಿ ನಾಯಕರ ಕೈಗೆ ಸಿಕ್ಕದೆ ದೂರ ಉಳಿದಿದ್ದು, ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಭವನಕ್ಕೆ ಕಳುಹಿಸಿದ್ದ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಸಿಡಿಮಿಡಿಗೊಂಡು ಸಿಎಂ ನಿವಾಸದಿಂದ ನಿರ್ಗಮಿಸಿದ್ದ ಕತ್ತಿ ನಂತರ ಸಿಎಂ ಸೇರಿದಂತೆ ಯಾವ ಬಿಜೆಪಿ ನಾಯಕರ ಕೈಗೂ ಸಿಗದೆ ದೂರ ಉಳಿದಿದ್ದಾರೆ ಎಂದು ಹೇಳಲಾಗ್ತಿದೆ. ರಾತ್ರಿಯೇ ಸಿಎಂ ಸೂಚನೆಯಂತೆ ಉಮೇಶ್ ಕತ್ತಿ ಅವರನ್ನು ಹುಡುಕಿಕೊಂಡು ಡಿಸಿಎಂ ಗೋವಿಂದ ಕಾರಜೋಳ ಹಾಗು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋದರೂ ಕತ್ತಿ ಕೈಗೆ ಸಿಗಲಿಲ್ಲ. ಇಂದು ಬೆಳಗ್ಗೆಯೂ ಮತ್ತೊಮ್ಮೆ ಕತ್ತಿ ಸಂಪರ್ಕ ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಕಾರಜೋಳ ಹಾಗು ಬೊಮ್ಮಾಯಿ ಸಿಎಂ ನಿವಾಸಕ್ಕೆ ಹಿಂದಿರುಗಿದ್ದಾರೆ.
ನಂತರ ಸಿಎಂ ಕೂಡ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕಡೆಗೆ ಬೇಸರದಲ್ಲೇ ಸಿಎಂ ರಾಜಭವನಕ್ಕೆ ತೆರಳಿದರು. ನಿನ್ನೆಯಿಂದಲೂ ಸಿಎಂ ಹಾಗೂ ಹಿರಿಯ ಸಚಿವರು ಸತತವಾಗಿ ಸಂಪರ್ಕ ಮಾಡಲು ಯತ್ನಿಸಿದರೂ ಉಮೇಶ್ ಕತ್ತಿ ಇನ್ನೂ ನಾಟ್ ರೀಚಬಲ್ ಆಗಿದ್ದಾರೆ. ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಗೈರುಹಾಜರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನಿಸಿಕೊಂಡಿರುವ ಉಮೇಶ್ ಕತ್ತಿ ಅವರನ್ನು ಸಂಪರ್ಕಿಸಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಸಿಎಂ ಇದೀಗ ಮತ್ತೋರ್ವ ಡಿಸಿಎಂ ಲಕ್ಷ್ಮಣ್ ಸವದಿಗೆ ವಹಿಸಿದ್ದಾರೆ.