ಬೆಂಗಳೂರು: ಬೆಳಗಾವಿ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕತ್ತಿ ಕುಟುಂಬಕ್ಕೆ ರಾಜ್ಯಸಭಾ ಟಿಕೆಟ್ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಮನವಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.
ಮುಂಜಾನೆಯೇ ಸಿಎಂ ಒಳ್ಳೆಯ ಮೂಡ್ನಲ್ಲಿರುತ್ತಾರೆ, ಸುದೀರ್ಘ ಮಾತುಕತೆ ನಡೆಸಬಹುದು ಎಂದುಕೊಂಡು ಹೋಗಿದ್ದ ಕತ್ತಿ ಜೊತೆ ಸಿಎಂ ಕೇವಲ 20 ನಿಮಿಷಗಳ ಮಾತುಕತೆ ನಡೆಸಿದರು. ಆದರೆ, ಶಾಸಕ ಉಮೇಶ್ ಕತ್ತಿ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದು, ಅದರಂತೆ ನಿಮ್ಮನ್ನು ಮಂತ್ರಿ ಮಾಡಲಾಗುತ್ತದೆ. ಆದರೆ, ಸಹೋದರನಿಗೆ ರಾಜ್ಯಸಭಾ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮತ್ತೊಂದು ಅವಧಿಗೆ ಅವಕಾಶ ಕೋರಿದ್ದು ಟಿಕೆಟ್ಗಾಗಿ ಬೆಳಗಾವಿಯಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ.