ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬ ಯುಗಾದಿ. ವರ್ಷದ ಮೊದಲ ಹಬ್ಬ ಯುಗಾದಿಯನ್ನು ಪ್ರತಿ ವರ್ಷ ಸಡಗರದಿಂದ ಆಚರಿಸುತ್ತೇವೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಕಳೆದ ಬಾರಿ ಮತ್ತು ಈ ಬಾರಿ ಯುಗಾದಿ ಹಬ್ಬದ ಸಿಹಿಯನ್ನು ಕೊರೊನಾ ಕಹಿಯಾಗಿಸಿದೆ.
ಮಹಾಮಾರಿ ಕೊರೊನಾದಿಂದಾಗಿ ಜನರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಮತ್ತೆ ಕೊರೊನಾ ಭೀತಿ ಮನೆ ಮಾಡಿದೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಇರಿ. ಹಬ್ಬದ ಖರೀದಿಗಾಗಿ ಯಾವುದೇ ಮಾರುಕಟ್ಟೆಗೆ ಹೋಗಬೇಡಿ. ತೀರಾ ಅಗತ್ಯ ಬಿದ್ದರೆ ಮನೆಯಿಂದ ಒಬ್ಬರು ಮಾತ್ರ ಹೊರ ಬಂದು ಅಗತ್ಯ ವಸ್ತು ಖರೀದಿಸಿ, ಸರ್ಕಾರದ ಹಾಗೂ ಪೊಲೀಸರ ಆದೇಶ ಪಾಲಿಸಿ. ಇನ್ನುಳಿದಂತೆ ಮನೆಯಲ್ಲೇ ಇದ್ದು ಸರಳವಾಗಿ ಹಬ್ಬ ಆಚರಿಸೋಣ. ನಮ್ಮಿಂದಲೇ ನಮ್ಮವರಿಗೆ ತೊಂದರೆಯಾಗೋದು ಬೇಡ. ಪ್ರತಿಯೊಬ್ಬರೂ ಸರ್ಕಾರದ ನಿಯಮಾವಳಿ ಪಾಲಿಸೋಣ.
ಪ್ರತಿಯೊಬ್ಬರೂ ಈ ನಿಯಮ ಅನುಸರಿಸದೇ ಇದ್ದರೆ ನಾಳೆಯ ದಿನ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು. ನಾವು ಕೊರೊನಾ ವಿರುದ್ಧ ಸೆಣಸಾಡುವ ಯೋಧರಾಗೋಣ. ಹೊಸ ವರ್ಷ ಯುಗಾದಿ ಸರಳವಾಗಿದ್ದರೂ ಸಿಹಿ ಭವಿಷ್ಯ ರೂಪಿಸಿ ಬಾಳು ಬೆಳಗಿಸೋಣ. ನಮ್ಮ ಆರೋಗ್ಯ.. ನಮ್ಮ ಜವಾಬ್ದಾರಿ, ಕೊರೊನಾ ಸೋಲಿಸಿ, ಭಾರತ ಗೆಲ್ಲಿಸಿ.
ಇದು ಈಟಿವಿ ಭಾರತ ಕಳಕಳಿ