ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್‍ಐಟಿ) ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಆದೇಶ ನೀಡುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಬಿಜೆಪಿ ನಿಯೋಗ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, "ಸರ್ಕಾರವು ದುರಾದೃಷ್ಟಕ್ಕೆ ಡಿಎಸ್‍ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುತ್ತಿದೆ. ಸರ್ಕಾರದ ಒತ್ತಡ ಇದ್ದರೆ ಡಿಎಸ್‍ಪಿ ಮಟ್ಟದ ಅಧಿಕಾರಿಯಿಂದ ಸಮರ್ಪಕ ತನಿಖೆ ಅಸಾಧ್ಯ. ಆದ್ದರಿಂದ ಎಸ್‍ಐಟಿ ತನಿಖೆಗೆ ಆಗ್ರಹಿಸಿದ್ದೇವೆ. ಗೃಹ ಸಚಿವರು ಇದೊಂದು ತಮಾಷೆಯ ವಿಷಯ ಎಂಬಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರಕಾರವೂ ಮೀನಮೇಷ ಎಣಿಸುತ್ತಿದೆ" ಎಂದರು.
"ಇವತ್ತು ನಾವು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಎಸ್‍ಐಟಿ ತನಿಖೆಗೆ ಸೂಚಿಸಲು ಕೋರಿದ್ದೇವೆ. ಹದಗೆಟ್ಟ ಕಾನೂನು ಸುವ್ಯವಸ್ಥೆ, ಗೊಂದಲದ ವಾತಾವರಣ, ವಿಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರಿಗೆ ಜಾಮೀನು ಕೊಟ್ಟಿದ್ದು, ಅವರಿಗೆ ಪಿಎಫ್‍ಐ ಸಂಪರ್ಕ ಇರುವ ಸಾಧ್ಯತೆ ಕುರಿತು ಗಮನ ಸೆಳೆಯಲಾಗಿದೆ. ಸಮಗ್ರ ತನಿಖೆಗೆ ಎಸ್‍ಐಟಿ ಸೂಚಿಸಲು ಕೋರಿದ್ದೇವೆ" ಎಂದು ಹೇಳಿದರು.
ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯಕ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
ಉಡುಪಿ ಘಟನೆಯ ವಿವರ: ವಾರದ ಹಿಂದೆ ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿ ವಾಶ್ರೂಂಗೆ ತೆರಳಿದಾಗ ಸಹಪಾಠಿ ವಿದ್ಯಾರ್ಥಿನಿಯರು ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ಯಾರೂ ವಿಡಿಯೋ ವೈರಲ್ ಆಗಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸ್ಪಷ್ಟನೆ ನೀಡಿತ್ತು. ಆದರೆ ನಂತರದಲ್ಲಿ ಪ್ರಕರಣ ರಾಜಕೀಯ ಆಯಾಮ ಪಡೆದುಕೊಂಡು, ರಾಜ್ಯ ಕಾಂಗ್ರೆಸ್ ಹಾಗೂ ಬಜೆಪಿ ಪಕ್ಷಗಳು ಈ ಬಗ್ಗೆ ಒಂದರ ಮೇಲೊಂದರಂತೆ ಹೇಳಿಕೆಗಳನ್ನು ನೀಡುತ್ತಿವೆ.
ಪ್ರಕರಣದ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿಲ್ಲ. ಪೊಲೀಸರು ಆರೋಪಿತ ವಿದ್ಯಾರ್ಥಿನಿಯ ಮೇಲೆ ಸುಮೋಟೋ ದೂರು ದಾಖಲಿಸಿಕೊಂಡಿದ್ದರು. ಆರೋಪಿತ ವಿದ್ಯಾರ್ಥಿನಿಯರನ್ನು ಬಂಧಿಸುವಂತೆಯೂ ರಾಜ್ಯದ ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಇದೀಗ ಈ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ಉಡುಪಿ ವಿಡಿಯೋ ವಿವಾದ: ಬಿಜೆಪಿ ಪ್ರತಿಭಟನೆ.. ಸಿಐಡಿ ತನಿಖೆಗೆ ಶ್ರೀನಿವಾಸ ಪೂಜಾರಿ ಆಗ್ರಹ