ಬೆಂಗಳೂರು: SORRY..SORRY..SORRY..ಇದೇ SORRY ಅನ್ನೋ ಪದ ಆ ಏರಿಯಾ ಜನರ ತಲೆ ಕೆಡಿಸಿತ್ತು. ಯಾರೋ ಪಾಗಲ್ ಪ್ರೇಮಿಯೇ ಈ ಕೆಲಸ ಮಾಡಿರಬಹುದು ಅಂತಾ ಜನ ಗುಸು ಗುಸು ಮಾತಾಡಿಕೊಳ್ತಾ ಇದ್ರು. ಅಷ್ಟಕ್ಕೂ ಅಲ್ಲಾಗಿದ್ದೇನು..?
ಕಾಲೇಜು ಗೋಡೆ ಮೇಲೂ SORRY..ಮೆಟ್ಟಿಲು ಮೇಲೂ SORRY.. ರಸ್ತೆ ಮೇಲೂ SORRY..ಮನೆ ಗೋಡೆ ಮೇಲೂ SORRY..ಜೊತೆಗೆ ಹಾರ್ಟ್ ನ ಸಿಂಬಲ್ ಬೇರೆ..ಇದೇ SORRY ಮತ್ತು ಹಾರ್ಟ್ ಸಿಂಬಲ್ ಇರುವ ಬರಹಗಳು ಸುಂಕದಕಟ್ಟೆ ಜನರ ತಲೆ ಕೆಡಿಸಿತ್ತು. ನಿನ್ನೆ ಮಧ್ಯರಾತ್ರಿ ಬೈಕಿನಲ್ಲಿ ಬಂದ ಇಬ್ಬರು ಯುವಕರು ಇಷ್ಟೆಲ್ಲಾ ಹುಚ್ಚಾಟ ಮೆರೆದಿದ್ದಾರೆ. ಎಲ್ಲಾ ಕಡೆ SORRY..SORRY ಎಂದು ಬರೆದು ಪರಾರಿಯಾಗಿದ್ದಾರೆ.
ಮಧ್ಯ ರಾತ್ರಿ ಡ್ಯೂಕ್ ಬೈಕ್ ನಲ್ಲಿ ಬಂದ ರೋಮಿಯೋಗಳಿಂದ ಕೃತ್ಯ..! : ಪಾಗಲ್ ಪ್ರೇಮಿಯ ಹುಚ್ಚಾಟನೋ..ಬೇರೆಯದ್ದೇ ಕಾರಣನೋ ಗೊತ್ತಿಲ್ಲ.. ಆದ್ರೆ ಮಧ್ಯರಾತ್ರಿ ಡ್ಯೂಕ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಏರಿಯಾ ಜನರೇ ಬೆಚ್ಚಿಬೀಳುವಂತೆ ಮಾಡಿದ್ದರು. ಎಲ್ಲೆಲ್ಲೂ ಕೆಂಪು ಬಣ್ಣದ ಸ್ಪ್ರೇ ನಿಂದ SORRY..SORRY ಎಂದು ಬರೆದಿದ್ದಾರೆ. ಈ ಯುವಕರ ಹುಚ್ಚಾಟ ಏರಿಯಾ ಜನರ ತಲೆಕೆಡಿಸಿದೆ.
ಸೋಮವಾರ ಮಧ್ಯರಾತ್ರಿ ಸುಮಾರು 11 ರಿಂದ 12 ಗಂಟೆಯ ಸಮಯ. ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಫುಡ್ ಡೆಲಿವರಿ ಬಾಯ್ಸ್ ಬಳಸುವ ಬ್ಯಾಗ್ ನಲ್ಲಿ ಸ್ಪ್ರೇ ತುಂಬಿಕೊಂಡು ಬಂದಿದ್ದರು. ಬಂದವರೇ ಸುಂಕದಕಟ್ಟೆಯ ಶಾಂತಿಧಾಮ ಕಾಲೇಜಿನ ಗೋಡೆ, ಮೆಟ್ಟಿಲು ಹಾಗೂ ರಸ್ತೆ ಮೇಲೆಲ್ಲ SORYY ಎಂದು ಬರೆದಿದ್ದಾರೆ. ಇದು ಯಾವುದೋ ಪ್ರೇಮಿಯ ಹುಚ್ಚಾಟನೇ ಇರಬೇಕು ಅಂತಾ ಜನ ಮಾತಾನಾಡಿಕೊಳ್ತಾ ಇದ್ರು. ಪ್ರೇಯಸಿ ಜೊತೆಗೆ ಜಗಳ ಮಾಡಿಕೊಂಡು SORRY ಕೇಳಿರಬಹುದು. ಏನೇ ಇದ್ದರೂ ಮನಸ್ಸಿನಲ್ಲಿರಲಿ. ಅದು ಬಿಟ್ಟು ಈ ರೀತಿ ಹುಚ್ಚಾಟ ತೋರಿದರೆ ಮಕ್ಕಳನ್ನು ಪೋಷಕರು ಕಾಲೇಜಿಗೆ ಕಳಿಸುವುದಾದರೂ ಹೇಗೆ. ಇದೆಲ್ಲ ನೋಡ್ತಿದ್ರೆ ನಿಜಕ್ಕೂ ಭಯ ಆಗುತ್ತೆ ಎಂದು ಏರಿಯಾ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಂತಿಧಾಮ ಕಾಲೇಜಿನ ಸುತ್ತಾಮುತ್ತ ಕ್ಷಮಿಸಿಬಿಡು ಎಂದು ಬರೆದಿರುವುದರಿಂದ ಇದ್ಯಾವುದೋ ಕಾಲೇಜು ಪ್ರೇಮ್ ಕಹಾನಿಯೇ ಇರಬೇಕು ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕಾಲೇಜು ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ರೋಮಿಯೋಗಳು ಯಾರು ಅನ್ನೋದನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ.