ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರನ್ನು ನಂಬಿ ಭೇಟಿಗೆ ಮನೆಗೆ ಆಹ್ವಾನಿಸುವ ಮುನ್ನ ಎಚ್ಚರ. ಆ್ಯಪ್ ಮೂಲಕ ಗಾಳ ಹಾಕಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುನಿಲ್ ಹಾಗೂ ಲಕ್ಷ್ಮಿಪ್ರಿಯ ಬಂಧಿತ ಆರೋಪಿಗಳು. ಮೋಸ ಹೋದ 26 ವರ್ಷದ ವ್ಯಕ್ತಿಯೊಬ್ಬ ನೀಡಿದ ದೂರಿನನ್ವಯ ಇಬ್ಬರನ್ನು ಬಂಧಿಸಲಾಗಿದೆ.
ದೂರುದಾರ ವ್ಯಕ್ತಿಗೆ ಆ್ಯಪ್ ಮೂಲಕ ದಿವ್ಯಾ ಎಂಬ ಹೆಸರಿನ ಹುಡುಗಿಯ ಪರಿಚಯವಾಗಿದೆ. ಪರಿಚಯದಿಂದ ಸಲುಗೆ ಸಂಪಾದಿಸಿದ್ದ ದೂರುದಾರ ವ್ಯಕ್ತಿ ಒಂದಷ್ಟು ಫೋಟೋ, ವಿಡಿಯೋಗಳನ್ನು ಯುವತಿಗೆ ರವಾನಿಸಿದ್ದ. ಬಳಿಕ ದೂರುದಾರ ಯುವಕ ಜನವರಿ 4ರಂದು ತನ್ನ ಮನೆಗೆ ಆಹ್ವಾನಿಸಿದ್ದ. ದಿವ್ಯಾ ಎಂಬ ಹೆಸರಿನಲ್ಲಿ ಪ್ರತಿಕ್ರಿಯಿಸಿದ್ದ ಆರೋಪಿ ಸುನಿಲ್ 'ನಾನು ಇವತ್ತು ಬ್ಯುಸಿ, ನನ್ನ ಸಹೋದರಿ ಲಕ್ಷ್ಮಿಪ್ರಿಯಳನ್ನು ಮನೆಗೆ ಕಳಿಸುವುದಾಗಿ ಹೇಳಿದ್ದ.
ಅದರಂತೆ ದೂರುದಾರ ವ್ಯಕ್ತಿ ಆರೋಪಿ ಲಕ್ಷ್ಮಿಪ್ರಿಯಳನ್ನು ಕೊಡುಗೆ ತಿರುಮಲಾಪುರದ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯೊಳಗೆ ಹೋಗುತ್ತಿದ್ದಂತೆ ಆಗಮಿಸಿದ್ದ ಸುನಿಲ್, ದೂರುದಾರನಿಗೆ 'ನೀನು ಲಕ್ಷ್ಮಿಪ್ರಿಯಳನ್ನು ಜೊತೆಯಲ್ಲಿ ಕರೆ ತಂದಿರುವ ವಿಡಿಯೋ, ಫೋಟೋ ಪೊಲೀಸರಿಗೆ ಕೊಡುವುದಾಗಿ ಬೆದರಿಸಿದ್ದ. ಬಳಿಕ ಇಬ್ಬರೂ ಆರೋಪಿಗಳು ದೂರುದಾರನ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ನಗದು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.
ಮೋಸ ಹೋದ ವ್ಯಕ್ತಿ ನೀಡಿರುವ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2.2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ, 1 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಸಾರ್ವಜನಿಕರ ಮೊಬೈಲ್ ಕಸಿಯುತ್ತಿದ್ದ ಕಳ್ಳರ ಬಂಧನ : ಕಳ್ಳತನ ಮಾಡಿದ ದ್ವಿಚಕ್ರ ವಾಹನದಲ್ಲೇ ದಾರಿಯಲ್ಲಿ ಸಾಗುವ ಸಾರ್ವಜನಿಕರ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾರಿ ಮುತ್ತು, ಸೈಯ್ಯದ್ ಶುಹೇಬ್ ಹಾಗೂ ಭರತ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 28ರಂದು ಸಂಜೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಿಳೇಕಹಳ್ಳಿ ಬಳಿ ಸುಜಿತ್ ಎಂಬಾತನ ಕೈಯಲ್ಲಿದ್ದ ಐಪೋನ್ ಎಗರಿಸಿದ್ದರು. ಫೋನ್ ಕಳೆದುಕೊಂಡ ಸುಜಿತ್ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಮೈಕೋಲೇಔಟ್ ಠಾಣಾ ಪೊಲೀಸರು ಫೋನ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮುಖ್ಯ ರಸ್ತೆಯಲ್ಲಿ ಸಂಚರಿಸುವವರೇ ಇವರ ಟಾರ್ಗೆಟ್: ಬಂಧಿತರಿಂದ ಸುಮಾರು 85 ಲಕ್ಷ ಮೌಲ್ಯದ 35 ಸ್ಮಾರ್ಟ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಈ ಕದ್ದ ಮೊಬೈಲ್ಗಳನ್ನು 5-10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಸಾರ್ವಜನಿಕರು ಆದಷ್ಟು ಜಾಗೃತರಾಗಿರಬೇಕು. ಅಲ್ಲದೇ ಘಟನೆ ಬಳಿಕ 112ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು‘ ಎಂದು ಡಿಸಿಪಿ ಸಿ.ಕೆ.ಬಾಬಾ ಮನವಿ ಮಾಡಿದರು.
ಇದನ್ನೂ ಓದಿ : ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ