ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಬಹುತೇಕ ಮಂದಿ ನಗರ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕೆಲ ಕಿಡಿಗೇಡಿಗಳು ಬೀಗ ಹಾಕಿರುವ ಮನೆಯನ್ನು ಗುರುತಿಸಿ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾರೆ. 90 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದ ಬಾಂಗ್ಲಾ ಮೂಲದ ಇಬ್ಬರನ್ನು ಬಾಗಲಗುಂಟೆ ಪೊಲೀಸರು ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ಶುಭಂಕಲ್ ಶಿಲ್ಲು ಹಾಗೂ ಸಂಜು ಸಹಾ ಬಂಧಿತರಾಗಿದ್ದು, 90 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಬಾಗಲಗುಂಟೆಯ ಎಂಹೆಚ್ಆರ್ ಬಡಾವಣೆ ನಿವಾಸಿ ಈರಪ್ಪ ಎಂಬುವವರು ಮನೆಯ ನವೀಕರಣ ಹಾಗೂ ಮೊಮ್ಮಗನ ಎಂಬಿಬಿಎಸ್ ವ್ಯಾಸಾಂಗಕ್ಕಾಗಿ 90 ಲಕ್ಷ ಹಣವನ್ನು ಹೊಂದಿಸಿದ್ದರು. ಅಷ್ಟೊತ್ತಿಗಾಗಲೇ ಲಾಕ್ಡೌನ್ ಜಾರಿಯಾಗಿದ್ದರಿಂದ ಮೇ 23ರಂದು ಮನೆ ಬೀಗ ಹಾಕಿ ಚಿಂತಾಮಣಿಯಲ್ಲಿರುವ ಮಗನ ಮನೆಗೆ ತೆರಳಿದ್ದರು. ಇತ್ತ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪಿಗಳು ಚಿಂದಿ ಆಯುವ ನೆಪದಲ್ಲಿ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ಗಮನಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಹಾಗೂ ಸಿಸಿಟಿವಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಖದೀಮರು, ನಕಲಿ ಕೀ ಬಳಸಿ 90 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.
ಹಣದ ಸಮೇತ ಬಾಂಗ್ಲಾಗೆ ತೆರಳಲು ಅಣಿಯಾಗಿದ್ದ ಕಳ್ಳರು, ಬಾಗಲಗುಂಟೆಯಿಂದ ಕೆ.ಆರ್.ಪುರಂಗೆ ಗೂಡ್ಸ್ ವಾಹನದಲ್ಲಿ ಬಂದಿದ್ದಾರೆ. ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಲು ಸ್ವಿಫ್ಟ್ ಕಾರನ್ನ ಬಾಡಿಗೆಗೆ ಮಾತನಾಡಿದ್ದಾರೆ. 40 ಸಾವಿರ ಬಾಡಿಗೆ ಮಾತಾಡಿ ಜೂನ್ 3 ರಂದು ಬೆಂಗಳೂರಿನಿಂದ ಹೊರಟಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮೂವರು ಬೈಕ್ ಕಳ್ಳರ ಬಂಧನ: 6 ಬೈಕ್ ಜಪ್ತಿ
ಮಾರ್ಗ ಮಧ್ಯೆ ಚಿತ್ತೂರಿನ ಪಲಂನೂರು ಬಳಿ ಪೊಲೀಸರು ಕಾರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ದಾಖಲೆಯಿಲ್ಲದ 90 ಲಕ್ಷ ರೂ. ಜತೆ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ನಂತರ ಆಂಧ್ರದ ಗಂಗಾವರಂ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ನಿಜಾಂಶ ಬಾಯಿಬಿಟ್ಟಿದ್ದಾರೆ. ಕದ್ದಿದ್ದ ಹಣದಲ್ಲಿ 1,600 ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.