ಬೆಂಗಳೂರು: ಮೂರು ಅಂತಸ್ತಿನ ಹಳೆಯ ಕಟ್ಟಡ ತೆರವುಗೊಳಿಸುವಾಗ ಪಿಲ್ಲರ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಪಶ್ಚಿಮ ಬಂಗಾಳದ ಇನಾಮ್ ಉಲ್ಲಾ ಹಾಗೂ ಸಿರಾಜ್ ಉಲ್ಲಾ ಮೃತಪಟ್ಟ ದುದೈರ್ವಿಗಳು. ಘಟನೆ ಸಂಬಂಧ ಕಟ್ಟಡದ ಮಾಲೀಕ ಪ್ರಕಾಶ್ ಹಾಗೂ ಗುತ್ತಿಗೆದಾರ ಅನ್ಬು ವಿರುದ್ಧ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಮೂರು ಅಂತಸ್ತಿನ ಕಟ್ಟಡವನ್ನು ಕಳೆದ ಒಂದು ವಾರದಿಂದ ಆರು ಮಂದಿ ಕಾರ್ಮಿಕರು ಡೆಮಾಲಿಷ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಇಂದು ಸಂಜೆ ಕಟ್ಟಡ ತೆರವುಗೊಳಿಸುವಾಗ ಪಿಲ್ಲರ್ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯ ವಹಿಸಿದ ಆರೋಪದಡಿ ಕಟ್ಟಡ ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿದ್ಯುತ್ ಶಾಕ್ಗೆ ಇಬ್ಬರು ಬಲಿ: ಒಂದು ವಾರದ ಹಿಂದೆ ಫೆ. 4ರ ರಾತ್ರಿ ಬೆಂಗಳೂರಿನ ಕೋಣನಕುಂಟೆಯ ಬಹುಮಹಡಿ ಕಟ್ಟಡವೊಂದರಲ್ಲಿ ವಿದ್ಯುತ್ ಶಾಕ್ ತಗುಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದರು. ಅಸ್ಸೋಂ ಮೂಲದ ದಿಲೀಪ್ ಹಾಗೂ ತುಮಕೂರು ಜಿಲ್ಲೆಯ ಮಧುಗಿರಿಯ ರಘು ಎಂಬುವರು ಅಸುನೀಗಿದ್ದರು. ರಾತ್ರಿ ವೇಳೆ ಎಸ್ಟಿಪಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕರೆಂಟ್ ಶಾಕ್ನಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತುಮಕೂರಲ್ಲಿ ನವದಂಪತಿ ದುರ್ಮರಣ: ಭೀಕರ ಅಪಘಾತದಲ್ಲಿ ನವ ದಂಪತಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ಶನಿವಾರ ನಡೆದಿದೆ. ರಘು(35), ಅನುಷಾ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿಯಿಂದ ಕಾರಿನಲ್ಲಿ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೇವಲ ಎರಡು ತಿಂಗಳ ಹಿಂದಷ್ಟೇ ರಘು ಹಾಗೂ ಅನುಷಾ ಮದುವೆ ಆಗಿದ್ದರು.
ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ