ಬೆಂಗಳೂರು: ಮೊನ್ನೆಯಷ್ಟೇ ನಗರದಲ್ಲಿ ತಾಯಿ-ಮಗಳನ್ನು ಬಲಿ ಪಡೆದ ಅಗ್ನಿ ಅವಘಡ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಅದೇ ಮಾದರಿಯ ಮತ್ತೊಂದು ದುರಂತ ಜನರನ್ನು ಬೆಚ್ಚಿಬೀಳಿಸಿದೆ.
ನ್ಯೂ ತರಗುಪೇಟೆ ಮಹಾಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮಿನಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಸ್ಫೋಟಗೊಂಡ ಕಟ್ಟಡದ ಮೇಲೆಯೇ ವಾಸವಿದ್ದ ಕುಟುಂಬದ ವೃದ್ಧೆ ಹಾಗೂ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ.
ಮನೆಯಲ್ಲಿ ಇಬ್ಬರು ಮೊಮ್ಮಕ್ಕಳೊಂದಿಗೆ ಇದ್ದ ಅಜ್ಜಿಗೆ ಭಯಾನಕ ಶಬ್ಧವೊಂದು ಕೇಳಿಸಿದೆ. ಈ ಶಬ್ಧ ಕೇಳಿ ಬೆಚ್ಚಿಬಿದ್ದ ವೃದ್ಧೆ ಹಾಗೂ ಮಕ್ಕಳು ಆತಂಕದಿಂದ ಕೂಗಾಡಿದ್ದಾರೆ. ಭಯದಿಂದ ಕಾಪಾಡಿ.. ಕಾಪಾಡಿ... ಚಿಕ್ಕಮಕ್ಕಳಿದ್ದಾರೆ ಎಂದು ವೃದ್ಧೆ ಕಿರುಚಾಡಿದ್ದಾರೆ. ಯಾರೋ ಇಬ್ಬರು ಪುಣ್ಯಾತ್ಮರು ಮೇಲೆ ಬಂದು ಅಜ್ಜಿಯನ್ನು ಹಾಗೂ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಬಂದು ಪ್ರಾಣ ಉಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವೃದ್ಧೆ ಸಾರಮ್ಮ ಆ ಶಬ್ಧ ಬಹಳ ಭಯಾನಕವಾಗಿತ್ತು ಎಂದು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಸ್ಫೋಟದಲ್ಲಿ ಇಬ್ಬರ ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಜಮೀರ್
ನಾನು ಕೆಲಸಕ್ಕೆ ಹೋಗಿದ್ದೆ, ಸುದ್ದಿ ತಿಳಿದು ಸ್ಥಳಕ್ಕಾಮಿಸಿದೆ. ಮನೆಯ ಬಾಗಿಲು ಕಿಟಕಿಗಳಿಗೆ ಹಾನಿಯಾಗಿದೆ. ಪಾತ್ರೆಗಳೆಲ್ಲವೂ ಕೆಳಗುರುಳಿವೆ ಎಂದು ಬದುಕುಳಿದ ಆ ಎರಡು ಪುಟ್ಟ ಮಕ್ಕಳ ತಾಯಿ ಸುಜಿ ತಿಳಿಸಿದ್ದಾರೆ.
ವೃದ್ಧೆ ಸಾರಮ್ಮಳ ಮಗ ಆನಂದ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ನಾವು ನಾಲ್ಕು ವರ್ಷಗಳಿಂದ ಇಲ್ಲಿಯೇ ವಾಸವಿದ್ದೇವೆ, ಇಲ್ಲಿ ಪಟಾಕಿ ವ್ಯವಹಾರ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನನ್ನ ತಂಗಿ ಮಕ್ಕಳು ಹಾಗೂ ನಮ್ಮ ತಾಯಿ ಸ್ಫೋಟ ನಡೆದ ವೇಳೆ ಮನೆಯಲ್ಲಿದ್ದರು, ಇನ್ಯಾರೂ ಇರಲಿಲ್ಲ. ಘಟನೆ ನಡೆದಾಗ ಯಾರೋ ದೇವರಂತೆ ಬಂದು ನಮ್ಮ ಕುಟುಂಬವನ್ನು ಅಪಾಯದಿಂದ ಪಾರು ಮಾಡಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರು.