ಬೆಂಗಳೂರು: ಆ ಮೂವರು ಗೆಳೆಯರು ಒಂದೇ ಏರಿಯಾದವರಾಗಿದ್ದರು. ಒಟ್ಟಿಗೆ ಕುಡಿಯುತ್ತಾ ಮೋಜು ಮಸ್ತಿ ಮಾಡುತ್ತಿದ್ದರು. ಮಂಗಳಮುಖಿಯರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿಕೊಂಡಿದ್ದರು. ಈ ನಡುವೆ ತೃತೀಯ ಲಿಂಗಿ ಜೊತೆಗಿದ್ದ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಮಾರಣಾಂತಿಕ ಹಲ್ಲೆಗೈದಿದ್ದ ಇಬ್ಬರನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಿ. ಜೆ. ಹಳ್ಳಿಯ ಎ. ಕೆ ಕಾಲೋನಿ ನಿವಾಸಿ ಸಾಮುಯೆಲ್ಸ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸ್ನೇಹಿತರಾದ ಪ್ರವೀಣ್ ಹಾಗೂ ಸುರೇಶ್ ಬಂಧಿತರಾಗಿದ್ದು, ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತರು ಹಾಗೂ ಹಲ್ಲೆಗೊಳಗಾದವರು ಸೇರಿ ಮೂವರು ಸ್ನೇಹಿತರಾಗಿದ್ದರು. ತೃತೀಯ ಲಿಂಗಿಗಳೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. ಮಂಗಳಮುಖಿಯೊಂದಿಗೆ ಸಾಮುಯೆಲ್ಸ್ ಜೊತೆಗಿರುವ ವಿಡಿಯೋ ತೆಗೆದುಕೊಂಡು ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.
ಇದೇ ವಿಚಾರಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಇವರ ನಡುವೆ ಕಿರಿಕ್ ಆಗುತ್ತಿತ್ತು. ನಿನ್ನೆ ಸಹ ಡಿಜೆ ಹಳ್ಳಿಯ ತ್ರಿವಳಿ ಸರ್ಕಲ್ ಬಳಿ ಸಾಮುಯೆಲ್ಸ್ ಲಾಂಗ್ ಹಿಡಿದುಕೊಂಡು ಪ್ರವೀಣ್ ಹಾಗೂ ಸುರೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಆರೋಪಿಗಳು ಲಾಂಗ್ ಕಸಿದು ಸಾಮುಮೆಲ್ಸ್ ಹಣೆ, ತಲೆಯ ಹಿಂಭಾಗಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ಸ್ಥಳೀಯರ ನೆರವಿನಿಂದ ಮನೆಯವರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಎಸ್. ಗುಳೇದ್ ಮಾಹಿತಿ ನೀಡಿದ್ದಾರೆ.
ಓದಿ: ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ: ಎಡಿಜಿಪಿ ಪ್ರತಾಪ್ ರೆಡ್ಡಿ