ಬೆಂಗಳೂರು: ಕೆಲ ಕೊಲೆ ಪ್ರಕರಣಗಳು ಆರಂಭಿಕ ತನಿಖೆಯಲ್ಲಿ ಕೆಲ ಅಂಶಗಳು ಹೊರಬಿದ್ದರೂ ಕೂಡ, ಮುಂದುವರೆದಂತೆ ನಾನಾ ತಿರುವು ಪಡೆಯುತ್ತವೆ. ಅದರ ಹಿಂದಿನ ರೋಚಕ ಹಿನ್ನೆಲೆ ಮುನ್ನೆಲೆಗೆ ಬರುತ್ತದೆ. ಕೆಲವೊಮ್ಮೆ ಅಮಾಯಕರಂತೆ ಕಂಡವರೂ ಸಹ ಆರೋಪಿಗಳಾಗಿರುತ್ತಾರೆ. ಆರೋಪಿ ಎಂದು ಬಂಧಿತರಾದವರೂ ಅಮಾಯಕರಾಗಿರುವ ಸಾಧ್ಯತೆ ಇರುತ್ತದೆ.
ಅದೇ ರೀತಿ ಸೆ.14ರಂದು ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೈದ್ಯ ವಿಕಾಸ್ ಕೊಲೆ ಪ್ರಕರಣವೂ ಸಹ ಹೊಸ ತಿರುವು ಪಡೆದಿದೆ. ಸೆಪ್ಟೆಂಬರ್ 10ರ ರಾತ್ರಿ ವಿಕಾಸ್(27) ಮೇಲೆ ಆರೋಪಿಗಳಾದ ಪ್ರಿಯತಮೆ ಪ್ರತಿಭಾ, ಗೌತಮ್, ಸುಶೀಲ್ ಮತ್ತು ಸೂರ್ಯ ಎಂಬ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸೆಪ್ಟೆಂಬರ್ 14ರಂದು ಚಿಕಿತ್ಸೆ ಫಲಿಸದೇ ವಿಕಾಸ್ ಮೃತಪಟ್ಟಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಮೊದಲಿಗೆ ವಿಕಾಸ್ ತಾನೇ ಮಾಡಿಕೊಂಡ ಎಡವಟ್ಟಿಗೆ ಬಲಿಯಾಗಿದ್ದಾನೆ ಎನ್ನಲಾಗಿತ್ತು. ಪ್ರಿಯತಮೆ ಪ್ರತಿಭಾಳ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ಕೊಲೆಯಾಗಿದ್ದಾನೆ ಅಂತಲೇ ಅಂದುಕೊಳ್ಳಲಾಗಿತ್ತು. ಆದರೆ, ಕೊಲೆ ಸಂಚಿಗೆ ಮತ್ತೊಂದು ಬಲವಾದ ಕಾರಣ ಇತ್ತೆಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಚೆನ್ನೈ ಮೂಲದ ವಿಕಾಸ್, ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, 2 ವರ್ಷ ಅಲ್ಲಿಯೇ ವೈದ್ಯರಾಗಿ ಕೆಲಸ ಮಾಡಿದ್ದರು. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ನಾಲ್ಕು ತಿಂಗಳ ಹಿಂದೆ ಸ್ವದೇಶಕ್ಕೆ ವಾಪಸ್ ಆಗಿದ್ದರು. ಬಳಿಕ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಮನೆ ಬಾಡಿಗೆ ಪಡೆದುಕೊಂಡು ಎಫ್‌ಎಂಜಿಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಖಾಸಗಿ ಪೋಟೋ ಅಪ್ಲೋಡ್: ವಿಕಾಸ್ ಹಾಗೂ ಚೆನ್ನೈ ಮೂಲದ ಪ್ರತಿಭಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಗರದಲ್ಲಿ ಒಂದೇ ಮನೆಯಲ್ಲಿ ಸಹ ಜೀವನ ನಡೆಸುತ್ತಿದ್ದರು. ವಿಕಾಸ್ ಕುಟುಂಬಸ್ಥರಿಗೂ ಪ್ರತಿಭಾ ಪರಿಚಯವಿತ್ತು. ಕೆಲ ದಿನಗಳ ಹಿಂದೆ ಪ್ರತಿಭಾ, ವಿಕಾಸ್ ಲ್ಯಾಪ್ ಟಾಪ್ ಪರಿಶೀಲಿಸುತ್ತಿದ್ದಾಗ ಇನ್‌ಸ್ಟಾಗ್ರಾಮ್ ಖಾತೆಗೆ ನೋಟಿಫಿಕೇಷನ್‌ಗಳು ಬರುತ್ತಿತ್ತು. ಹೀಗಾಗಿ ಅದನ್ನು ನೋಡಿದಾಗ ಪ್ರತಿಭಾಳ ತೀರಾ ಖಾಸಗಿ ಪೋಟೋಗಳು ಬೇರೊಬ್ಬರಿಗೆ ಕಳುಹಿಸಿರುವುದು ಕಂಡು ಬಂದಿತ್ತು.
ಇದರಿಂದ ಆಘಾತಕ್ಕೆ ಒಳಗಾದ ಪ್ರತಿಭಾ, ಖಾಸಗಿ ಪೋಟೋಗಳನ್ನು ಬೇರೊಬ್ಬರಿಗೆ ಶೇರ್ ಮಾಡಿದ್ದರ ಬಗ್ಗೆ ಪ್ರಶ್ನಿಸಿದಾಗ ವಿಕಾಸ್ ನನಗೆ ಈ ರೀತಿ ಖಾಸಗಿ ಪೋಟೋ ಕಳುಹಿಸುವುದು, ಬೇರೆಯವರು ಕಳಿಸುವ ಫೋಟೋ ನೋಡುವುದು ಇಷ್ಟ ಎಂದು ಹೇಳಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತಂತೆ.
ಪುಸಲಾಯಿಸಿ ಕರೆದೊಯ್ದು ಹಲ್ಲೆ: ವಿಕಾಸ್ ನಡವಳಿಕೆಯಿಂದ ದಿಗ್ಬ್ರಮೆಗೆ ಒಳಗಾಗಿದ್ದ ಪ್ರತಿಭಾ ಈ ವಿಚಾರವನ್ನು ತನ್ನ ಸ್ನೇಹಿತ, ಇಂಜಿನಿಯರ್ ಸುಶೀಲ್‌ಗೆ ತಿಳಿಸಿದ್ದಳು. ಸೆಪ್ಟೆಂಬರ್ 10ರಂದು ತಡರಾತ್ರಿ ಮಾತನಾಡುವ ಸಲುವಾಗಿ ಸುಶೀಲ್ ವಾಸವಿರುವ ನ್ಯೂ ಮೈಕೋ ಲೇಔಟ್ ಮನೆಗೆ ವಿಕಾಸ್‌ನನ್ನು ಕರೆದೊಯ್ದಿದ್ದಳು. ಅಲ್ಲಿ ಪುನಃ ಖಾಸಗಿ ಪೋಟೋ ಶೇರ್ ಮಾಡಿದ್ದ ವಿಚಾರ ಪ್ರಸ್ತಾಪವಾಗಿ ಸುಶೀಲ್, ಗೌತಮ್, ಸೂರ್ಯ ವಿಕಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜೊತೆಗೆ, ಆತನ ತಲೆಯನ್ನು ಗೋಡೆಗೆ ಜಜ್ಜಿದ್ದರು.
ಇದರಿಂದ ವಿಕಾಸ್ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದ ಪರಿಣಾಮ ಪ್ರತಿಭಾಳೇ ಮತ್ತೊಬ್ಬ ಸ್ನೇಹಿತನ ಕಾರು ಕರೆಸಿಕೊಂಡು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಕಾಸ್, ಸೆಪ್ಟೆಂಬರ್ 14ರಂದು ಮೃತಪಟ್ಟಿದ್ದ. ಅಲ್ಲಿಯ ತನಕ ಪ್ರತಿಭಾ ಹೇಳಿದ್ದೇ ಸತ್ಯ ಎಂದು ಎಂದುಕೊಳ್ಳಲಾಗಿತ್ತು. ಆದರೆ ಬೇಗೂರು ಠಾಣೆ ಪೊಲೀಸರ ತನಿಖೆ ಮುಂದೆ ಪ್ರತಿಭಾಳ ಕಳ್ಳಾಟ ನಡೆಯಲಿಲ್ಲ.
ಅಕ್ರಮ ಸಂಬಂಧಕ್ಕೆ ವೈದ್ಯ ಬಲಿ : ಆರೋಪಿ ಸುಶೀಲ್ ಮತ್ತು ಪ್ರತಿಭಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ದೈಹಿಕ ಸಂಪರ್ಕವನ್ನೂ ಕೂಡ ಹೊಂದಿದ್ದರು. ಪ್ರತಿಭಾಳನ್ನು ಪ್ರೀತಿಸುತ್ತಿರುವಾಗಲೇ ಆಕೆ ಸುಶೀಲ್ ಸಹವಾಸ ಮಾಡಿದ್ದು ವಿಕಾಸ್ಗೆ ಕಣ್ಣು ಕೆಂಪಾಗಿಸಿತ್ತು. ಹಲವು ಬಾರಿ ಆತನ ಸಹವಾಸ ಬಿಡುವಂತೆ ವಿಕಾಸ್ ಪ್ರತಿಭಾಗೆ ಹೇಳಿದ್ದ. ಆಕೆ ಮಾತು ಕೇಳದಿದ್ದಾಗ ಆಕೆಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ.
ಇದರಿಂದ ದಿಗ್ಭ್ರಮೆಗೊಂಡ ಪ್ರತಿಭಾ ಸುಶೀಲ್‌ಗೆ ಎಲ್ಲ ವಿಚಾರ ವಿವರಿಸಿದ್ದಾಳೆ. ಸೆಪ್ಟೆಂಬರ್ ರಂದು ವಿಕಾಸ್ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ಸೆಪ್ಟೆಂಬರ್ 10ರಂದು ಮಾತಾಡುವ ನೆಪದಲ್ಲಿ ವಿಕಾಸ್‌ನನ್ನು ಕರೆದೊಯ್ದು ಕೊಠಡಿಯೊಳಗೆ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಸತ್ಯ ಹೊರ ಬಿದ್ದಿದೆ.
ಇದನ್ನೂ ಓದಿ: ಗೆಳತಿ, ಆಕೆಯ ತಾಯಿಯೊಂದಿಗೂ ಸಂಬಂಧ: ನಶೆಯಲ್ಲಿ ಮನೆಗೆ ತೆರಳಿ ಶವವಾದ ಯುವಕ