ಬೆಂಗಳೂರು: ಶ್ರೇಷ್ಠ ಗಾಯಕರಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಕೂಡ ಒಬ್ಬರು ಎಂದು ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಿದ್ಧ ವಿಮರ್ಶಕರಾದ ಡಾ. ಜಿ.ಎಸ್. ಆಮೂರ, ಸಾಹಿತಿ ಹೀ.ಚಿ.ಶಾಂತವೀರಯ್ಯ ಹಾಗೂ ಖ್ಯಾತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಇಂದು ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ, ಕ.ಸಾ.ಪ. ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಹಾಗೂ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರುಗಳು ಅಗಲಿದ ಚೇತನಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಂತರ ಮಾತನಾಡಿದ ಡಾ. ದೊಡ್ಡರಂಗೇಗೌಡರು, ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಡನೆ ಕಳೆದ ನಾಲ್ಕೈದು ದಶಕಗಳ ಒಡನಾಟ ಹಾಗೂ ಅವಿನಾಭಾವ ಸಂಬಂಧವನ್ನು ಎಂದಿಗೂ ಮರೆಯಲಾರೆ. ನನ್ನ ರಚನೆಯ ಮುನ್ನೂರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಪರಸಂಗದ ಗೆಡ್ಡೆತಿಮ್ಮ ಚಿತ್ರದ ನಿಸರ್ಗದ ಗೀತೆಗೆ ಬಾಲು ಅವರು ಹಾಡಿದ್ದು ನನಗೆ ಜನಪ್ರಿಯತೆಯನ್ನು ಗಳಿಸುವಂತೆ ಮಾಡಿತ್ತು. ಜಗತ್ತು ಕಂಡ ಶ್ರೇಷ್ಠ ಗಾಯಕರ ಸಾಲಿನಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸೇರಿದ್ದಾರೆ. ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಎಂದರೆ ನಂಬಲಾಗಲಾರದು ಅವರ ಗೀತೆಗಳ ಮೂಲಕ ಅವರು ನಮ್ಮೊಂದಿಗೆ ಸದಾ ಇದ್ದೇ ಇರುತ್ತಾರೆ ಎಂದರು.
ಡಾ. ಮನು ಬಳಿಗಾರ್ ಮಾತನಾಡಿ, ಸಮಕಾಲೀನ ಭಾರತೀಯ ಸಾಹಿತ್ಯದ ಹಿರಿಯ ವಿದ್ವಾಂಸರು ಎನಿಸಿದ್ದ ಆಮೂರ ಅವರಿಗೆ ಕನ್ನಡ, ಇಂಗ್ಲಿಷ್ ಮಾತ್ರವಲ್ಲದೇ ಸಂಸ್ಕೃತ ಮತ್ತು ಮರಾಠಿ ಮುಂತಾದ ಭಾಷೆಗಳ ಮೇಲೂ ಅಪಾರವಾದ ಪರಿಣತಿ ಇತ್ತು. ಅವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಐವತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಆಮೂರರು ಕನ್ನಡ ಸಾಹಿತ್ಯ ಕುರಿತು ಇಂಗ್ಲಿಷ್‌ನಲ್ಲಿ ಬರೆದು ಆ ಮೂಲಕ ಕನ್ನಡಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಅಪರೂಪದ ಮೇಧಾವಿ. ಕನ್ನಡದ ಅತ್ಯಂತ ಗರಿಷ್ಠ ಬಹುಮಾನವುಳ್ಳ, ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡುವ ನೃಪತುಂಗ ಪ್ರಶಸ್ತಿಯನ್ನು ಆಮೂರರಿಗೆ ನೀಡಲು ಇತ್ತೀಚಿಗೆ ಘೋಷಣೆ ಮಾಡಲಾಗಿತ್ತು. ದುರ್ದೈವವಶಾತ್ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕವು ಮಹಾ ಮೇಧಾವಿಯನ್ನು ಕಳೆದುಕೊಂಡಂತಾಗಿದೆ ಎಂದರು ಕಂಬನಿ ಮಿಡಿದರು.
ಹಾಗೆಯೇ, ಆಕರ್ಷಕ ಭಾಷಣಕಾರರಾಗಿದ್ದ ಹೀ.ಚಿ. ಶಾಂತವೀರಯ್ಯ ಅವರು ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳೂ ಸೇರಿದಂತೆ ಹತ್ತಾರು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಸಹ ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯೂ ಸಹ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವುಂಟಾಗಿದೆ.
ಇನ್ನೂ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಸಂಗೀತ ಕ್ಷೇತ್ರಕ್ಕೆ, ಸಾಹಿತ್ಯಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಭಾಷೆ ಮೇಲಿನ ಅವರಿಗಿದ್ದ ಪ್ರೀತಿ ಅವರ್ಣನೀಯ. ಅವರ ಸಾವು ಕೂಡ ಅತ್ಯಂತ ವಿಷಾದನೀಯ ಎಂದರು.