ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ಕಂದಾಯ ಸಚಿವ ಆರ್ ಅಶೋಕ್, ಐಟಿ ಬಿಟಿ ಸಚಿವ ಅಶ್ವತ್ ನಾರಾಯಣ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ಮದ್ಯೆ ಸ್ಪರ್ಧೆ ಪ್ರಾರಂಭವಾಗಿದೆ. ಬಿಬಿಎಂಪಿ ಚುನಾವಣೆ ಕೆಲವೇ ತಿಂಗಳಲ್ಲಿ ಘೋಷಣೆ ಆಗುವ ಸಂಭವವಿದೆ.
ಈ ನಿಟ್ಟಿನಲ್ಲಿ ಸರ್ಕಾರ ಕೂಡ 15 ದಿನಗಳಲ್ಲಿ ಬೆಂಗಳೂರು ನಗರಾಭಿವೃದ್ಧಿಗೆ ₹6500 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸದ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೈಯಲ್ಲಿತ್ತು.
ನಂತರ ಆ ಸ್ಥಾನ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಇದೆ. ಆದರೆ, ಮುಂಬರುವ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಉಸ್ತುವಾರಿ ನೇಮಕ ಮಾಡುವ ಚಿಂತನೆಯಲ್ಲಿ ಬೊಮ್ಮಾಯಿ ಇದ್ದಾರೆ.
ಕೋವಿಡ್, ಮಳೆ, ನಗರೋತ್ಥಾನ ಉಸ್ತುವಾರಿ ವಹಿಸಿಕೊಂಡಿರೋ ಕಂದಾಯ ಸಚಿವ ಆರ್ ಅಶೋಕ್ ಉಸ್ತುವಾರಿ ರೇಸ್‌ನಲ್ಲಿ ಮುಂದಿದ್ದಾರೆ. ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ.
ಮೂರು ಸಚಿವರ ವಿರುದ್ಧ ಬೆಂಗಳೂರಿನ ಶಾಸಕರು, ಸಚಿವರ ಗಮನಕ್ಕೆ ತರದೆ ಸಭೆ ನಡೆಸುತ್ತಿರೋ ಆರೋಪ ಕೇಳಿ ಬಂದಿದೆ. ಮೂವರು ಸಚಿವರೂ ಒಬ್ಬರಿಗೊಬ್ಬರು ಆಹ್ವಾನ ನೀಡದೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ ಹಾಗೂ ವಿ ಸೋಮಣ್ಣ ಪರ ನಗರದ ಶಾಸಕರು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅಶೋಕ್ ಪರ ಧ್ವನಿ ಎತ್ತದ ಆಪ್ತರು, ಅಶ್ವತ್ಥ್ ನಾರಾಯಣ, ಸೋಮಣ್ಣ ಪರ ತಿರುಗುವುದು ಸಾಮ್ರಾಟ್‌ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಶೀಘ್ರವೇ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಲಿರೋ ಸಿಎಂ, ಯಾರದ್ದೇ ಹೆಸರು ಉಸ್ತುವಾರಿಯಾಗಿ ನೇಮಿಸಿದ್ರೆ ಆಂತರಿಕ ಕಲಹಕ್ಕೆ ನಾಂದಿ ಆಗಲಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.