ಬೆಂಗಳೂರು: ಮೋಟಾರು ವಾಹನ ತೆರಿಗೆ ಪಾವತಿ ಕಟ್ಟುವುದರಿಂದ ಬಚಾವಾಗಲು ಎರಡು ಖಾಸಗಿ ಬಸ್ಗಳು ಒಂದೇ ನಂಬರ್ ಬಳಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಆರ್‌ಟಿಒ ಇನ್ಸ್ಪೆಕ್ಟರ್ ರಾಜಣ್ಣ ನೇತೃತ್ವದಲ್ಲಿನ ತಂಡ ದಾಳಿ ಮಾಡಿ ನಾಗರಬಾವಿ ಬಳಿ ಒಂದೇ ನಂಬರ್ನ ಎರಡು ಬಸ್ಗಳನ್ನು ಹಿಡಿದಿದ್ದಾರೆ.
ನಗರದ ನಾಗರಬಾವಿಯ ಬಳಿ ಭಾರತಿ ಹೆಸರಿನ KA-51-C-717 ಎಂಬ ಸಂಖ್ಯೆಯ ಬಸ್ಗಳು ಒಂದೇ ರೀತಿ ನಂಬರ್ ಅಳವಡಿಕೆ ಮಾಡಿ ನಗರದ ಹಲವೆಡೆ ಓಡಾಟ ನಡೆಸಿದ್ದವು. ಈ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಒಂದೇ ನಂಬರ್ ಬಸ್ಗಳು ಪತ್ತೆಯಾದ ಕಾರಣ ಪೊಲೀಸರು ಆರ್‌ಟಿಒ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಹೀಗಾಗಿ ಕಾರ್ಯಾಚರಣೆ ಮಾಡಿ ಎರಡು ಬಸ್ಗಳನ್ನ ಜಪ್ತಿ ಮಾಡಲಾಗಿದೆ.
ಈ ಕುರಿತು ಆರ್‌ಟಿಒ ಇನ್ಸ್ಪೆಕ್ಟರ್ ರಾಜಣ್ಣ ಮಾತನಾಡಿ, ನಗರದಲ್ಲಿ ಎರಡು ಬಸ್ಗಳು ಒಂದೇ ನಂಬರ್ ಅಳವಡಿಕೆ ಮಾಡಿ ಓಡಾಟ ಮಾಡ್ತಿರುವ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ನಮ್ಮ ಹಿರಿಯಾಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದಾಗ, ತೆರಿಗೆ ಕಟ್ಟದೇ ಆರ್‌ಟಿಒ ಇಲಾಖೆಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದರು.
ಹೀಗಾಗಿ ಎರಡು ಬಸ್ಗಳನ್ನ ಜಪ್ತಿ ಮಾಡಿ ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಹಾಗೆ ಬಸ್ಗಳ ಮಾಲೀಕರು ಯಾರು ಅನ್ನೋದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ. ಈವರೆಗೆ ಯಾರೂ ಅಧಿಕೃತ ಮಾಲೀಕರು ಬಂದಿಲ್ಲ ಎಂದರು.