ಬೆಂಗಳೂರು: 6ನೇ ವೇತನ ಆಯೋಗ ಜಾರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ 20 ಸಾವಿರಕ್ಕೂ ಅಧಿಕ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ. ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಲಿದೆ.
ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಬೆಳಗಾವಿಯ ತಾಲೂಕಿನ ಮುತ್ನಾಳದಲ್ಲಿ ನೌಕರರ ಬೇಡಿಕೆಗೆ ಪ್ರತಿಕ್ರಿಯಿಸಿ, 'ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ನೌಕರರ ಬೇಡಿಕೆಗಳಿವು..
- 6ನೇ ವೇತನ ಆಯೋಗದ ಅನ್ವಯ ಸಂಬಳ ಪಾವತಿ
- ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿ
- ಬಾಕಿ ವೇತನ ತಕ್ಷಣ ಬಿಡುಗಡೆ
- ಷರತ್ತುಗಳಿಲ್ಲದೆ ಕಡ್ಡಾಯವಾಗಿ ವಾರದ ರಜೆ
- ಕಡಿತ ಮಾಡಿದ ರಜೆಗಳ ವಾಪಸಾತಿ
- ಪೂರ್ಣ ಪ್ರಮಾಣದಲ್ಲಿ 4 ಪಾಳಿಗಳಲ್ಲಿ ಬಸ್ ಕಾರ್ಯಾಚರಣೆ
- ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯ ಕೆಲಸಕ್ಕೆ ಆದ್ಯತೆ
- ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯುವ ಯೋಜನೆ ಕೈಬಿಡಿ
ಸರ್ಕಾರ ಕೊಟ್ಟ ಭರವಸೆಗಳು
- 6ನೇ ವೇತನ ಆಯೋಗ ಶಿಫಾರಸು ಪರಿಗಣನೆ
- ಕೋವಿಡ್ 19ನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ
- ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ
- ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ
- ತರಬೇತಿ ನೌಕರರ ಅವಧಿ 2ರಿಂದ 1 ವರ್ಷಕ್ಕೆ ಇಳಿಕೆ
- ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿ
- ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ವೇಳೆ ಭತ್ಯೆ ನೀಡಲು ತೀರ್ಮಾನ
- ಘಟಕದ ವ್ಯಾಪ್ತಿಯಲ್ಲಿ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
- ಎನ್ಐಎನ್ ಐಎನ್ಸಿ ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆ