ಬೆಂಗಳೂರು: ವಿಕಾಸಸೌಧದಲ್ಲಿ ವಿಧಾನಪರಿಷತ್ ಶಾಸಕರುಗಳಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಈ ಶಿಬಿರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗೆಚಟಾಕಿಯೊಂದಿಗೆ ಪರಿಷತ್ ಸದಸ್ಯರಿಗೆ ಪಾಠ ಮಾಡಿದರು.
ಶಿಬಿರದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿ ಅಂದ್ರೇನು ಹೇಳು ಮೊದಲು. ಜಿಎಸ್‌ಟಿ ಅಂದ್ರೆ ತಿಳಿದುಕೊಂಡಿದಿಯಾ ಇಲ್ವಾ? ಎಂದು ಜೆಡಿಎಸ್ ಎಂಎಲ್‌ಸಿ ರಮೇಶ್ ಗೌಡಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಜಿಎಸ್‌ಟಿ ಫುಲ್ ಫಾರ್ಮ್ ಗೊತ್ತಾಗದೇ ರಮೇಶ್ ಗೌಡ ತಬ್ಬಿಬ್ಬಾದರು. ನೀನೂ ಬ್ಯುಸಿನೆಸ್ ಮಾಡ್ತೀಯಾ, ನೀನು ಬಜೆಟ್ ಮೆಂಟೇನ್ ಮಾಡ್ತಿಯೋ ಇಲ್ವೋ? ನಿಂದು ಬಜೆಟ್ ಜಾಸ್ತಿ ಆಗದಿದ್ದರೆ ನೀನೆಲ್ಲಿ ಎಂಎಲ್‌ಸಿ ಆಗುತ್ತಿದ್ದೆ ಹೇಳು ಎಂದು ನಗೆಚಟಾಕಿ ಹಾರಿಸಿದರು.
ಇದೇ ವೇಳೆ ನಿನ್ನಂತವರು ಬಂದಿರೋದ್ರಿಂದಲೇ ಖರ್ಚು ಜಾಸ್ತಿ ಆಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಂಎಲ್ ಸಿ ರಮೇಶ್ ಗೌಡ ಹಾಗೂ ಗೋವಿಂದ ರಾಜ್ ಕಾಲೆಳೆದ ಪ್ರಸಂಗ ನಡೆಯಿತು. ಎಂಎಲ್ಸಿಗಳ ಅನುದಾನ ಹೆಚ್ಚಳ ಮಾಡಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಶಾಸಕರಿಂದ ಜನ ಹೆಚ್ಚು ನಿರೀಕ್ಷೆ ಮಾಡ್ತಾರೆ, ವಿಧಾನಪರಿಷತ್ ಸದಸ್ಯರಿಂದ ಹೆಚ್ಚು ನಿರೀಕ್ಷೆ ಮಾಡಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ರಮೇಶ್ ಗೌಡ, ವಿಧಾನಸಭೆ ಸದಸ್ಯರಿಗಿಂತ ಹೆಚ್ಚು ವಿಧಾನಪರಿಷತ್ ಸದಸ್ಯರ ಖರ್ಚು ಜಾಸ್ತಿ ಆಗಿದೆ ಎಂದರು. ಆಗ ನೀನು ಜಾಸ್ತಿ ಖರ್ಚು ಮಾಡಬಹುದು, ನಿನ್ನಂತವರು ಬಂದಿರೋದ್ರಿಂದಲೇ ಖರ್ಚು ಜಾಸ್ತಿ ಆಗ್ತಿದೆ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮೀಸಲಾತಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ಯಾರು ತಪ್ಪು ತಿಳಿದುಕೊಳ್ಳಬೇಡಿ. ಶಾಸಕರ ಮೇಲೆ ಜನರ ನಿರೀಕ್ಷೆ ಜಾಸ್ತಿ ಇರುತ್ತದೆ. ಹಾಗಾಗಿ ಹೆಚ್ಚು ಅನುದಾನ ಕೊಡಲಾಗುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದರು. ಎಂಎಲ್ಎ ಗಳಿಗಿಂತ ನಾವೇ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡುತ್ತೇವೆ ಎಂದು ಪರಿಷತ್ ಸದಸ್ಯರು ಪ್ರತಿಕ್ರಿಯಿಸಿದರು. ಮೊದಲು ಇಷ್ಟು ಹಣ ಖರ್ಚು ಮಾಡುತ್ತಿರಲಿಲ್ಲ. ನಿಮ್ಮಂತವರು ಬಂದಿರುವುದರಿಂದ ಅಷ್ಟೊಂದು ಹಣ ಖರ್ಚಾಗುತ್ತಿದೆ ಎಂದು ಪರಿಷತ್ ಸದಸ್ಯ ಗೋವಿಂದರಾಜ್ ಅವರ ಕಾಲೆಳೆದರು.
ಯಾವುದೇ ಕಾರಣಕ್ಕೂ ಗೈರಾಗಬೇಡಿ: ವಿಧಾನಸಭೆಗೆ ಮತ್ತು ಪರಿಷತ್ಗೆ ಯಾವುದೇ ಕಾರಣಕ್ಕೆ ಗೈರಾಗಬೇಡಿ. ತುರ್ತು ಕೆಲಸ ಮತ್ತು ಮನೆಯಲ್ಲಿ ಆರೋಗ್ಯ ಸರಿಯಿಲ್ಲ ಅಂದ್ರೆ ಓಕೆ. ಆದ್ರೆ ಸುಖಾಸುಮ್ಮನೆ ಗೈರಾಗಬೇಡಿ ಎಂದು ಕಿವಿಮಾತು ಹೇಳಿದರು.
ಇದರಿಂದ ನಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ ಹಾಗೆ ಆಗಲ್ಲ. ಯಾವುದೇ ಕಮಿಟಿ ಸದಸ್ಯರಾಗಿದ್ರೆ ಕೂಡ ಸಭೆಗೆ ಗೈರಾಗಬೇಡಿ. ಜನರಿಗೆ ಮೋಸ ಮಾಡಿದ ಹಾಗೆ ಆಗುತ್ತದೆ. ಈ ವೇಳೆ ವಾಟಾಳ್ ನಾಗರಾಜ್ ಉದಾಹರಣೆ ಕೊಟ್ಟ ಸಿದ್ದರಾಮಯ್ಯ, ಅವರು ಐದು ನಿಮಿಷ ಕೂಡ ಸದನ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದಕ್ಕಿಂತ ಯಾವ ಕೆಲಸ ಇದೆ. ಆಯ್ಕೆಯಾಗಿ ಬಂದಿರುವುದು ಸಭೆಯಲ್ಲಿ ಭಾಗಿಯಾಗಲು. ನಾನು ಒಂದೇ ಒಂದು ಅಧಿವೇಶನ ತಪ್ಪಿಸಿಲ್ಲ. ನಾನು ತಾಲೂಕಿನ ಸದಸ್ಯನಾಗಿದ್ದೆ. ಆವತ್ತು ಕೂಡ ಒಂದೇ ಒಂದು ದಿನ ಗೈರಾಗಿರಲಿಲ್ಲ. ಕಡ್ಡಾಯವಾಗಿ ಸದನದಲ್ಲಿ ಹಾಜರಾಗುವಂತೆ ಸಿದ್ದರಾಮಯ್ಯ ಸಲಹೆ ನೀಡಿದರು.