ಬೆಂಗಳೂರು: ಮನೆಗಳ್ಳತನ, ಸರಗಳ್ಳತನ ಸೇರಿದಂತೆ ಹಲವು ರೀತಿಯಲ್ಲಿ ಖದೀಮರು ಕಳ್ಳತನ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಮಾಡುವ ಸಿಸ್ಟಮ್ ಕಳ್ಳತನ ಮಾಡಿರುವುದನ್ನು ನೋಡಿದ್ದೀರಾ?. ಇದು ಆಶ್ಚರ್ಯವೆನಿಸಿದರೂ ಸತ್ಯ. ಇಲ್ಲೊಬ್ಬ ಕಳ್ಳ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಮಾಡುವ ಸಿಸ್ಟಮ್ ಕದ್ದಿದ್ದಾನೆ.
ವಿ.ವಿ.ಪುರಂ ಪೊಲೀಸ್ ಠಾಣೆಯ ಕಣ್ಣಳತೆ ದೂರದಲ್ಲಿ ಈ ಘಟನೆ ನಡೆದಿದೆ. ವಿ.ವಿ.ಪುರಂ ಸಂಚಾರ ಠಾಣೆಯ ಎಎಸ್ಐ ಗೋವಿಂದರಾಜು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿದಿನ ಮೆಡಿಕಲ್ ಕಾಲೇಜು ಬಳಿಯ ಜಂಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಿದ್ದೆ. ಅ. 20ರಂದು ಬೆಳಗ್ಗೆ ಬಂದು ನೋಡಿದಾಗ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಕಳ್ಳತನವಾಗಿರುವುದು ಗೊತ್ತಾಗಿದೆ.
ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಜೊತೆ ಸಿಗ್ನಲ್ ಕಂಟ್ರೋಲರ್, ಎಸಿ-ಡಿಸಿ ಪವರ್ ಸಪ್ಲೈಯರ್ ಯೂನಿಟ್, ಚಾರ್ಜರ್ ಕಂಟ್ರೋಲರ್, ರೆಗ್ಯೂಲೇಟರ್ ಕಳ್ಳತನವಾಗಿವೆ. ಇವುಗಳ ಮೌಲ್ಯ 3.20 ಲಕ್ಷ ರೂಪಾಯಿ ಆಗಿದೆ ಎಂದು ದೂರಿನಲ್ಲಿ ಗೋವಿಂದ ರಾಜು ಉಲ್ಲೇಖಿಸಿದ್ದಾರೆ.
ಈ ಕಳ್ಳತನ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.