ಮೈಸೂರು : ಈ ಸಲದ ದಸರಾ ಮಹೋತ್ಸವವನ್ನು ಸರಳವೂ ಅಲ್ಲದೇ, ಅದ್ದೂರಿಯೂ ಅಲ್ಲದೇ ಸಾಂಪ್ರದಾಯಿಕವಾಗಿ ಪ್ರಾಯೋಜಕತ್ವದ ಮೂಲಕ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಅರಮನೆ ಆಡಳಿತ ಮಂಡಳಿಯ ಕಚೇರಿಯಲ್ಲಿ ಇಂದು ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಸೇರಿದಂತೆ ಉನ್ನತ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು. ದಸರಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಬರದ ಪರಿಣಾಮದಿಂದ ದಸರಾ ಮಹೋತ್ಸವವನ್ನು ಅದ್ದೂರಿಯೂ ಅಲ್ಲದೇ, ಸರಳವೂ ಅಲ್ಲದೇ ಸಾಂಪ್ರದಾಯಿಕವಾಗಿ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದಸರಾವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಯೋಜಕತ್ವ ಪಡೆದುಕೊಳ್ಳುವವರಿಗೆ ಸರ್ಕಾರ ಕೆಲವು ಸೂಚನೆ ನೀಡಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ದಸರಾವನ್ನು ಸರಳ ದಸರಾ ಎಂದು ಕರೆಯದೇ ಬಹುತೇಕ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದಲ್ಲಿ ನಡೆಸಲು ಕೈಗೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಅಕ್ಟೋಬರ್ 23ರಂದು ಏರ್ ಶೋ: 5 ವರ್ಷಗಳ ಬಳಿಕ ದಸರಾ ಮಹೋತ್ಸವದಲ್ಲಿ ಮತ್ತೆ ಪೂರ್ಣ ಪ್ರಮಾಣದ ಏರ್ ಶೋ ನಡೆಯುತ್ತಿದೆ. ಅಕ್ಟೋಬರ್ 22 ರಂದು ಪೂರ್ವಾಭ್ಯಾಸ ನಡೆಯಲಿದ್ದು, ಅಕ್ಟೋಬರ್ 23 ರಂದು ಪೂರ್ಣ ಪ್ರಮಾಣದ ಏರ್ ಶೋ ನಗರದ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆಯಲಿದೆ. 23ರ ಸಂಜೆ 4 ಗಂಟೆಗೆ ಶೋ ಆರಂಭವಾಗಲಿದ್ದು, 45 ನಿಮಿಷ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಒದಗಿಸಿದರು.
ಇಸ್ರೇಲ್‌ನಲ್ಲಿ ಮೈಸೂರಿಗರು ಸಿಲುಕಿರುವ ಮಾಹಿತಿ ಇಲ್ಲ: ಇಸ್ರೇಲ್ ಯುದ್ಧಪೀಡಿತ ಪ್ರದೇಶದಲ್ಲಿ ಮೈಸೂರಿನ ನಿವಾಸಿಗಳು ಹಾಗೂ ಕುಟುಂಬದವರು ಸಿಲುಕಿರುವ ಮಾಹಿತಿ ಇಲ್ಲ. ಹಾಗೊಂದು ವೇಳೆ ಸಿಲುಕಿದ್ದರೆ ಮಾಹಿತಿ ನೀಡಿ. ನಂಜನಗೂಡಿನ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿಯವರೆಗೆ ಸಿಕ್ಕಿಲ್ಲ. ಅವರ ಕುಟುಂಬದವರು ನಮ್ಮನ್ನು ಸಂಪರ್ಕಿಸಿಲ್ಲ. ಸಾರ್ವಜನಿಕರು 1128 ಸಹಾಯವಾಣಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ದಸರಾಗೆ ಹೆಚ್ಚಿನ ಭದ್ರತೆ- ನಗರ ಪೋಲಿಸ್ ಕಮಿಷನರ್: ಜಂಬೂಸವಾರಿಯ ದಿನ ಹಾಗೂ ನವರಾತ್ರಿಯ ಇತರ ದಿನಗಳಲ್ಲಿ ಈ ಬಾರಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಜಂಬೂಸವಾರಿ ಮೆರವಣಿಗೆ ಶಿಸ್ತುಬದ್ಧವಾಗಿ ಸಾಗಲು ರೂಪುರೇಷೆಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತಿಯೊಂದು ಜಿಲ್ಲೆಯ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಒಟ್ಟಿಗೆ ಸಾಗಲಿದ್ದು, ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಮುಂದೆ ಮೊದಲ ಬಾರಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಹಲವರು ಸಾಗಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ವಿವರ ನೀಡಿದರು.
ಮಹಿಷಾ ದಸರಾಗೆ ಅನುಮತಿ ನೀಡಿಲ್ಲ: ಮಹಿಷಾ ದಸರಾ ಆಚರಣೆ ಸಮಿತಿ ಹಾಗೂ ಚಾಮುಂಡಿ ಬೆಟ್ಟ ಚಲೋ ಎರಡು ಕಾರ್ಯಕ್ರಮಗಳ ಆಯೋಜಕರಿಂದ ಪತ್ರ ಬಂದಿದ್ದು, ಇಬ್ಬರಿಗೂ ಅನುಮತಿ ನೀಡಿಲ್ಲ. ಮಹಿಷಾ ದಸರಾ ಆಚರಣೆ ಸಮಿತಿ ಚಾಮುಂಡಿ ಬೆಟ್ಟದಲ್ಲಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಟೌನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಪತ್ರ ನೀಡಿದೆ.
ಬಿಜೆಪಿ ಕಡೆಯಿಂದ 5 ಸಾವಿರ ಮಂದಿ ಚಾಮುಂಡಿ ಚಲೋ ಕಾರ್ಯಕ್ರಮ ಮಾಡುತ್ತೇವೆ ಎಂದು ಪತ್ರ ನೀಡಿದ್ದಾರೆ. ಇಬ್ಬರಿಗೂ ಯಾವುದೇ ಅನುಮತಿ ನೀಡಿಲ್ಲ. ಇದೇ ತಿಂಗಳ 12ನೇ ತಾರೀಖು ಇಬ್ಬರ ಅನುಮತಿ ಪತ್ರದ ಬಗ್ಗೆ ಚರ್ಚೆ ಮಾಡಿ ಹೇಳುತ್ತೇವೆ ಎಂದರು. ಯಾರಾದರೂ ಮೈಸೂರು ನಗರ ಹಾಗೂ ದಸರಾಗೆ ಧಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ದಸರಾ ಜಂಬೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು