ಬೆಂಗಳೂರು: ಕೋವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಜನಸಂದಣಿಯಾಗುವುದನ್ನು ತಪ್ಪಿಸಲು ಪ್ರಮುಖ ಮಾರುಕಟ್ಟೆಗಳನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಆದರೆ ಕಲಾಸಿಪಾಳ್ಯ ಮಾರುಕಟ್ಟೆ ವ್ಯಾಪಾರಿಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕಲಾಸಿಪಾಳ್ಯ ಮಾರುಕಟ್ಟೆ ಅಧ್ಯಕ್ಷ ಆರ್.ವಿ.ಗೋಪಿ ಮಾತನಾಡಿ, ಕಳೆದ ವರ್ಷ ಮಾರುಕಟ್ಟೆ ಸ್ಥಳಾಂತರಿಸಿ ನಮ್ಮನ್ನು ಸಿಂಗೇನ ಅಗ್ರಹಾರದಲ್ಲಿ ಬಿಟ್ಟಿದ್ರು. ಅಲ್ಲಿ ವ್ಯವಸ್ಥೆ ಇಲ್ಲದೆ ಮಳೆ ಬಂದು ಕೊಚ್ಚೆ ಆಗಿ ಸಾಕಷ್ಟು ಜನ ಸಾವನ್ನಪ್ಪಿದರು. 8ರಿಂದ 9 ಜನ ಕೋವಿಡ್ಗೆ ಬಲಿಯಾದ್ರು. ಎಲ್ಲೇ ಹೋದ್ರೂ ಕೋವಿಡ್ ಬರುತ್ತದೆ. ಮಾರುಕಟ್ಟೆಯಲ್ಲಿ ಜನರೇ ಇಲ್ಲ. ಹಾಗಾಗಿ ವರ್ಗಾವಣೆ ಯಾಕೆ ಮಾಡಬೇಕು. ಮಾರುಕಟ್ಟೆ ನಡೆಸಲು ಸಮಯ ನಿಗದಿ ಮಾಡಲಿ. ಯಶವಂತಪುರ ಎಪಿಎಂಸಿ ಯಾರ್ಡ್ ವರ್ಗಾವಣೆ ಮಾಡೋದಿಲ್ಲ. ಕಲಾಸಿಪಾಳ್ಯ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಸಿಟಿ ಮಾರ್ಕೆಟ್ನಲ್ಲಿ ಜನದಟ್ಟಣೆ ಇದೆ. ಆದರೆ ಕಲಾಸಿಪಾಳ್ಯದಲ್ಲಿ ಇರೋದಿಲ್ಲ. ಈಗಾಗಲೇ ರೈತರು ಬರೋದು ಕಡಿಮೆ ಆಗಿದೆ. ಗ್ರಾಹಕರೂ ಇಲ್ಲ. ಹೀಗಾಗಿ ಮಾರುಕಟ್ಟೆ ಬಂದ್ ಮಾಡಿದ್ರೂ ಪರ್ವಾಗಿಲ್ಲ. ಆದ್ರೆ ಬೇರೆ ಕಡೆ ಸ್ಥಳಾಂತರಿಸುವುದು ಬೇಡ ಎಂದು ಮನವಿ ಮಾಡಿದರು. ಕಲಾಸಿಪಾಳ್ಯದಲ್ಲಿ 400ರಷ್ಟು ಅಂಗಡಿಗಳಿವೆ. ಆದರೂ ಎರಡನೇ ಅಲೆಯಲ್ಲಿ ಇಲ್ಲಿವರೆಗೆ ಯಾರಿಗೂ ಕೋವಿಡ್ ಹಬ್ಬಿಲ್ಲ. ಸಾಮಾಜಿಕ ಅಂತರ ಪಾಲಿಸಿ ವ್ಯಾಪಾರ ಮಾಡಲಾಗ್ತಿದೆ. ಹೀಗಾಗಿ ಸ್ಥಳಾಂತರ ಮಾಡುವುದು ಬೇಡ ಎಂದು ಒತ್ತಾಯಿಸಿದರು.