ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ತಿಂಗಳ ಹಿಂದೆ ಕೇವಲ ಕೆ.ಜಿಗೆ 20 ರೂ.ಗೆ ಒಂದು ಕೆ.ಜಿ. ಸಿಗುತ್ತಿದ್ದ ಟೊಮೆಟೊ ಇದೀಗ 80ರಿಂದ 100 ರೂ.ಗೆ ಜಿಗಿದಿದೆ. ಮಹಾನಗರದ ವಿವಿಧ ಮಾರುಕಟ್ಟೆಗಳಲ್ಲಿ ಟೊಮೆಟೊ 80 ರೂ.ಗೆ ಸಗಟು ಹಾಗೂ 100 ರೂ.ಗೆ ಚಿಲ್ಲರೆ ರೂಪದಲ್ಲಿ ಲಭಿಸುತ್ತಿದೆ.
ಬೆಂಗಳೂರು ಹೊರವಲಯದ ಮಳಿಗೆ ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರುವ ವ್ಯಾಪಾರಿಗಳು ಕೆಜಿಗೆ 100 ರೂ.ನಂತೆ ಟೊಮೆಟೊ ಮಾರಾಟ ಮಾಡುತ್ತಿದ್ದಾರೆ. ನಗರದ ಕೆಲವು ತರಕಾರಿ ವ್ಯಾಪಾರಿಗಳು ನಿನ್ನೆ, ಮೊನ್ನೆಯವರೆಗೂ ಕೆ.ಜಿಗೆ 60 ರೂಪಾಯಿಯಂತೆ ಮಾರಾಟ ಮಾಡಿದ್ದರು. ಆದರೆ ಇಂದು ಅವರು 70 ರಿಂದ 80 ರೂ. ಹೇಳುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬೆಲೆ ಏರಿಕೆಗೆ ಕಾರಣಗಳೇನು? : ಸಕಾಲಕ್ಕೆ ಬಾರದ ಮಳೆ, ಅಕ್ಕಪಕ್ಕದ ರಾಜ್ಯಗಳಿಂದ ಸಮರ್ಪಕವಾಗಿ ತರಕಾರಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಸಾಕಷ್ಟು ರೈತರಿಗೆ ಟೊಮೆಟೊ ಬೆಳೆ ಹಿಂದೆ ಕಹಿ ಅನುಭವ ನೀಡಿದೆ. ಬೆಲೆ ಸರಿಯಾಗಿ ಸಿಗದೇ ರಸ್ತೆಗೆ ಸುರಿದಿದ್ದನ್ನು ಕಂಡಿದ್ದೇವೆ. ಹಂತಹಂತವಾಗಿ ಬೆಂಗಳೂರು ಸುತ್ತಮುತ್ತಲಿನ ತರಕಾರಿ ಬೆಳೆಯುವ ರೈತರು ಹೂವು ಬೆಳೆಯುವತ್ತ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಟೊಮೆಟೊ ಪೂರೈಕೆಯ ಕೊರತೆಗೆ ಕಾರಣವಾಗಿದೆ.
ಇದರ ಜೊತೆಗೆ, ಬಿಳಿ ನೊಣ ಕಾಟ ಹಾಗೂ ಹವಾಮಾನ ವೈಪರೀತ್ಯದಿಂದಲೂ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಶನಿವಾರದ ಮಾರುಕಟ್ಟೆಯಲ್ಲಿ 15 ಕೆ.ಜಿ ತೂಕದ ಒಂದು ಬಾಕ್ಸ್ ಸುಮಾರು 1,100 ರೂ.ಗೆ ಮಾರಾಟವಾಗುವ ಮೂಲಕ ಟೊಮೆಟೊ ಬೆಳೆಗಾರರಲ್ಲಿ ಕೊಂಚ ಹರ್ಷ ಮೂಡಿಸಿತ್ತು. ಆದರೆ, ಹೊಸ ಟೊಮೆಟೊ ಬೆಳೆ ಬರುವವರೆಗೂ ಸಮಸ್ಯೆ ಹೀಗೆಯೇ ಇರಲಿದೆ.
ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮೆಟೊದ ಒಂದು ಕ್ರೇಟ್ ನಿನ್ನೆ 1,300 ರೂಪಾಯಿವರೆಗೂ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗುತ್ತಿದೆ ಎಂಬ ಮಾಹಿತಿಯೂ ಇದೆ. ಮುಂಗಾರು ಮಳೆ ಸರಿಯಾಗಿ ಬಾರದ ಕಾರಣ ಶೇ 30ರಷ್ಟು ಬೆಲೆ ನಾಶವಾಗಿದೆ.
ದೇಶದಲ್ಲೆಡೆ ಸಮಸ್ಯೆ: ಟೊಮೆಟೊ ಬೆಲೆ ಏರಿಕೆ ಇಡೀ ದೇಶಕ್ಕೆ ತಲೆ ಬಿಸಿ ಉಂಟುಮಾಡಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ ಬೆಲೆ 100 ರೂಪಾಯಿ ದಾಟಿದೆ. ಮೇ ತಿಂಗಳಲ್ಲಿ ಪ್ರಮುಖ ಟೊಮೆಟೊ ಬೇಡಿಕೆಯ ರಾಜ್ಯಗಳಾದ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಕೆಜಿಗೆ 2 ರಿಂದ 5 ರೂಪಾಯಿ ಇತ್ತು. ಒಂದೇ ತಿಂಗಳಲ್ಲಿ ಬೆಲೆಯಲ್ಲಿ ಶೇ. 1900ರಷ್ಟು ಏರಿಕೆಯಾಗಿದೆ.
ಒಂದೆರಡು ತಿಂಗಳಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಮೂಲಗಳು ತಿಳಿಸಿವೆ. ಟೊಮೆಟೊ ಗಿಡಗಳು ಮೂರು ತಿಂಗಳಿನಲ್ಲಿದ್ದಾಗ ವಾರಕ್ಕೆ ಎರಡು ಬಾರಿ ಫಸಲು ಬಿಡುತ್ತವೆ. ಈ ಸಸ್ಯಗಳು 1-2 ತಿಂಗಳ ಅವಧಿಗೆ ಫಸಲು ನೀಡುತ್ತವೆ. ಆದಾಗ್ಯೂ, ಇದು ವೈವಿಧ್ಯತೆ, ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿದೆ ಎಂದು ತಿಳಿಸಿದೆ.
ಮೈಸೂರು ರೈತರ ಪ್ರತಿಕ್ರಿಯೆ: ಮೈಸೂರು ಜಿಲ್ಲೆಯ ಹಲವು ಕಡೆ ರೈತರು ಟೊಮೆಟೊ ಬೆಳೆಯುತ್ತಾರೆ. ಮುಖ್ಯವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣಗಿರುವ ಹುಳಿ ಟೊಮೆಟೊ ಬೆಳೆಯುತ್ತಾರೆ. ಆಧುನಿಕ ರೀತಿ ಬೇಸಾಯ ಮಾಡುವ ರೈತರು ದಪ್ಪ ಪ್ರಮಾಣದ ಜಾಮ್ ಟೊಮೆಟೊ ಬೆಳೆಯುವರು. ಮೈಸೂರಿಗೆ ನಾಲ್ಕು ಜಿಲ್ಲೆಗಳ ರೈತರು ತಾವು ಬೆಳೆದ ಟೊಮೆಟೊ ಮಾರಾಟ ಮಾಡಲು ಮೈಸೂರಿನ ಬಂಡಿಪಾಳ್ಯದ ಆರ್.ಎಂ.ಸಿ ಮಾರುಕಟ್ಟೆಗೆ ತರುತ್ತಾರೆ. ಇಲ್ಲಿ ಟೊಮೆಟೊ ಕೊಳ್ಳಲು ಕೇರಳದ ವ್ಯಾಪಾರಸ್ಥರು ಹೆಚ್ಚಾಗಿ ಬರುತ್ತಾರೆ. ಆದರೀಗ ಟೊಮೆಟೊ ಸೇರಿದಂತೆ ಇತರೆ ತರಕಾರಿ ದರಗಳಲ್ಲಿ ಹೆಚ್ಚಳವಾಗಿದೆ.
ಪ್ರತಿದಿನ ಅಡುಗೆಗೆ ಟೊಮೆಟೊ ಅತ್ಯಗತ್ಯ. ಹೀಗಿರುವಾಗ ಇದೇ ಬೆಳೆ ಸದ್ಯ ಗ್ರಾಹಕರ ಕೈ ಸುಡುತ್ತಿದೆ. ಹುಳಿ ಟೊಮೆಟೊ ಚಿಲ್ಲರೆ ಮಾರುಕಟ್ಟೆಯಲ್ಲಿ ನೂರರ ಗಡಿ ದಾಟಿದೆ. ಸರಿಯಾಗಿ ಮಳೆಯಾಗದ ಕಾರಣ ಬೆಳೆ ಕಡಿಮೆಯಾಗಿ ಟೊಮೆಟೊ ದರ ಏರಿಕೆ ಕಂಡಿದೆ. ಕಳೆದ 15 ದಿನಗಳಿಂದ ವಾತಾವರಣದಲ್ಲಿ ವ್ಯತ್ಯಾಸವಾಗಿದ್ದು ಚಂಡಮಾರುತದ ಪರಿಣಾಮವಾಗಿ ಬೆಳೆ ಹಾಳಾಗಿದೆ. ಇದೇ ರೀತಿ ಮಳೆ ಬಾರದೇ ಹೋದರೆ, ಒಂದು ಕೆಜಿ ಟೊಮೆಟೊಗೆ 200 ರೂಪಾಯಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಟೊಮೆಟೊ ಬೆಳೆಗಾರ ಶಿವಶಂಕರ್.
ಇದನ್ನೂ ಓದಿ: ಬೆಂಗಳೂರಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ..ಅಬ್ಬಬ್ಬಾ 1 ಕೆಜಿಗೆ 100 ರೂ!