ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸೆ.1 ರಿಂದ ಜಾರಿಗೆ ಬರುವಂತೆ ಟೋಲ್ ದರ ಹೆಚ್ಚಳ ಮಾಡಿದ್ದು, ಈಗಾಗಲೇ ಕೋವಿಡ್ ಬರೆಯಿಂದ ಬೆಂದಿರುವ ವಾಹನ ಚಾಲಕರು, ಮಾಲೀಕರು ಮತ್ತಷ್ಟು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ವರ್ಷಗಳಿಂದ ಬದುಕಿನ ದಡ ತಲುಪುವುದೇ ಕಷ್ಟ ಅನ್ನುವ ಸ್ಥಿತಿ ನಿರ್ಮಾಣವಾಗಿರುವಾಗ, ಟೋಲ್ ದರ ಹೆಚ್ಚಳದ ಗಾಯವನ್ನೂ ಸಹಿಸಿಕೊಳ್ಳುವ ಸ್ಥಿತಿ ವಾಹನದ ಮಾಲೀಕ-ಚಾಲಕರಿಗೆ ಎದುರಾಗಲಿದೆ. ಕಳೆದ ಕೆಲ ದಿನಗಳಿಂದ ವಾಹನಗಳು ರಸ್ತೆಗಿಳಿದಿದ್ದು, ಈ ಮಧ್ಯೆ ಎನ್ಎಚ್ಎಐ ಈ ದರ ಪರಿಷ್ಕರಣೆ ಮಾಡಿದ್ದು, ಇದಕ್ಕೆ ಸರ್ಕಾರದಿಂದ ಸಮ್ಮತಿ ಸಹ ಸಿಕ್ಕಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರು ಸೆ.1 ರಿಂದ ಟೋಲ್ ಹೆಚ್ಚಳದ ಹೊರೆಯನ್ನೂ ಹೊರಬೇಕಾಗಿದೆ.
ದೇಶದ 21 ಟೋಲ್ ಪ್ಲಾಜಾಗಳ ಪೈಕಿ ರಾಜ್ಯದ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-75) ಮಾರ್ಗದ ನೆಲಮಂಗಲ ಟೋಲ್ನ ಬೆಲೆ ಕೂಡ ಹೆಚ್ಚಾಗಿದೆ. ನೆಲಮಂಗಲ ಟೋಲ್ನಲ್ಲಿ ಆ.31ರವರೆಗೆ 65 ರೂ. ಪಾವತಿಸುತ್ತಿದ್ದ ವಾಹನ ಸವಾರರು ಸೆ.1 ರಿಂದ 70 ರೂ. ಪಾವತಿಸುವುದು ಅನಿವಾರ್ಯ. ಏಕಮುಖ ಸಂಚಾರಕ್ಕೆ ವಿಧಿಸುತ್ತಿದ್ದ 45 ರೂ. ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಮಾಸಿಕ ಪಾಸ್ ದರ 40 ರೂ. ಹೆಚ್ಚಿಸಿದ್ದು, ಇನ್ಮುಂದೆ 1390 ರೂ. ನೀಡಬೇಕಾಗುತ್ತದೆ. ಬಸ್ ಹಾಗೂ ಟ್ರಕ್ಗಳ ಏಕಮುಖ ಸಂಚಾರದ ಬೆಲೆ ತಲಾ 5 ರೂ. ಮತ್ತು 10 ರೂ. ಹೆಚ್ಚಳವಾಗಲಿದೆ. ಅಂತೆಯೇ ಮಾಸಿಕ ಪಾಸ್ ದರವನ್ನು 140 ರೂ. ಹೆಚ್ಚಿಸಲಾಗಿದೆ. ಅಲ್ಲಿಗೆ ವಾಹನ ಮಾಲೀಕರು ಇನ್ನು ಮುಂದೆ ಮಾಸಿಕ ಪಾಸ್ಗೆ 4,865 ರೂ. ಪಾವತಿಸಲೇಬೇಕಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ದರ ಹೆಚ್ಚಳ ಮಾಡಿರಲಿಲ್ಲ. ಪ್ರತಿ ವರ್ಷ ಟೋಲ್ ಬೆಲೆ ಶೇ.5ರಷ್ಟು ಹೆಚ್ಚಾಗುತ್ತದೆ. ಈಗ ಸೆ.1 ರಿಂದ ಹೆಚ್ಚಳ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚಳ 3.30 ರೂ. ಇಲ್ಲವೇ 3 ರೂ. ಆದರೆ ರೌಂಡ್ ಫಿಗರ್ ಮಾಡಿ 5 ರೂ. ಹೆಚ್ಚಿಸುವ ಅವಕಾಶ ಕಾನೂನಿನಲ್ಲಿ ಇದೆ. ದೇಶದ 20 ಟೋಲ್ ಪ್ಲಾಜಾಗಳಲ್ಲಿ ಬೆಲೆ ಹೆಚ್ಚಳ ಆಗಿದೆ. ಅದರಲ್ಲಿ ರಾಜ್ಯದಿಂದ ಬೆಂಗಳೂರು-ಹಾಸನ ರಸ್ತೆಗೆ ಬೆಲೆ ಹೆಚ್ಚಳ ಆಗಿದೆ. ಗುತ್ತಿಗೆ ನೀಡಿದ ಸಂದರ್ಭದಲ್ಲಿ ವಾರ್ಷಿಕ ಹೆಚ್ಚಳದ ಅವಕಾಶ ಇರುತ್ತದೆ. ಕೇಂದ್ರ ಸರ್ಕಾರ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಿದೆ. ಕೋವಿಡ್ ಆತಂಕದ ವರ್ಷದಲ್ಲಿ ಬೆಲೆ ಹೆಚ್ಚಳ ಸರಿಯಲ್ಲ ಎಂದು ರಾಜ್ಯ ಟ್ರಾವೆಲ್ಸ್ನ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಹೇಳಿದರು.
ಈಗಾಗಲೇ ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಶೇ.100 ರಸ್ತೆ ಸುಂಕ ಅಧಿಕ ಸಂಗ್ರಹ ಆಗುತ್ತಿದೆ. ಅದು ಮಾತ್ರವಲ್ಲದೆ ಇಂಧನದ ಬೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಶೇ.40ರಷ್ಟು ಅಧಿಕವಾಗಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ದರ ಹೆಚ್ಚಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.