ಬೆಂಗಳೂರು : ಇಂದು 'ವಿಶ್ವ ಮಣ್ಣಿನ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ಬದುಕಿನ ಎಲ್ಲಾ ಸ್ತರಗಳಲ್ಲೂ ಪೂರಕವಾಗಿರುವ ಮಣ್ಣು ಈಗ ವಿವಿಧ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು, ಪೋಷಕಾಂಶ ಮಟ್ಟ ಕಡಿಮೆಯಾಗುತ್ತಿದೆ. ಇದನ್ನು ಅರಿತುಕೊಳ್ಳುವ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಪ್ರತಿ ವರ್ಷ ಡಿಸೆಂಬರ್ 5 ರಂದು 'ವಿಶ್ವ ಮಣ್ಣು ದಿನ' ಆಚರಿಸಲಾಗುತ್ತಿದೆ.
2002 ರಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಸಾಯ್ಲ್ ಸೈನ್ಸ್ ಎಂಬ ಸಂಸ್ಥೆ ಈ ಮಣ್ಣಿನ ದಿನಾಚರಣೆಯನ್ನು ಆರಂಭಿಸಿತು.
ಮಣ್ಣಿನ ಪ್ರಮಾಣ, ಗುಣಮಟ್ಟಗಳಲ್ಲಿ ವ್ಯತ್ಯಯವುಂಟಾದರೆ ಅದು ನಮ್ಮ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಮಣ್ಣಿನ ರಕ್ಷ ಣೆಯೇ ಪ್ರತಿಯೊಬ್ಬರ ಧ್ಯೇಯವಾಗಿರಬೇಕು ಎನ್ನುತ್ತಾರೆ ಕೃಷಿ ತಜ್ಞರು. ಮಣ್ಣು ಭೂಮಿಯ ಮೇಲಿನ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳ ಮಿಶ್ರಣವಾಗಿದೆ. ಇದು ಸೀಮಿತ ನೈಸರ್ಗಿಕ ಸಂಪನ್ಮೂಲವಾಗಿದೆ. ವಾತಾವರಣಕ್ಕಿಂತ ಮಣ್ಣು ಮೂರು ಪಟ್ಟು ಹೆಚ್ಚು ಇಂಗಾಲವನ್ನು ಹೊಂದಿದೆ.
ಬದಲಾಗುವ ವಾತಾವರಣದ ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ. ಅಂದಾಜು ಶೇ. 95 ರಷ್ಟು ಆಹಾರ ನಮಗೆ ಭೂಮಿಯಿಂದ ಸಿಗುತ್ತದೆ. ನಮ್ಮ ಜಾಗತಿಕ ಮಣ್ಣುಗಳಲ್ಲಿ ಶೇ. 33 ರಷ್ಟು ಈಗಾಗಲೇ ಅಳಿದುಹೋಗಿದೆ. ಮೇಲ್ಪದರಲ್ಲಿರುವ 1 ರಿಂದ 2 ಇಂಚು ಮಣ್ಣು ಸತ್ವದಿಂದ ಕೂಡಿದೆ. ಮಣ್ಣಿನಲ್ಲಿ 17 ಪೋಷಕಾಂಶಗಳಿರಬೇಕು. ಆದರೆ ಇಂದು ನಾವು ಭೂಮಿಗೆ 3 ರಿಂದ 4 ಪೋಷಕಾಂಶಗಳನ್ನು ಮಾತ್ರ ನೀಡುತ್ತಿದ್ದೇವೆ. ಆದ್ದರಿಂದಲೇ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಾಗೃತಿ : ಸುಸ್ಥಿರ ಕೃಷಿ ಪದ್ಧತಿಗೆ ಒತ್ತು ನೀಡುವ ಮೂಲಕ ಮಣ್ಣಿನ ಆರೋಗ್ಯ ಹೆಚ್ಚಿಸಲು ಮುಂದಾಗಿರುವ ಕೃಷಿ ಇಲಾಖೆ, ಈ ಸಂಬಂಧ ರಾಜ್ಯದ 4,573 ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಿದೆ.
ಕೃಷಿ ವಿಧಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಮುಂದಾಗಿದೆ. ಅದಕ್ಕಾಗಿ ರಾಜ್ಯದ 4,573 ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ವೇಳೆ ಯಾವ ಗೊಬ್ಬರ? ಎಷ್ಟು ಪ್ರಮಾಣದಲ್ಲಿ ಹಾಕಬೇಕು? ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ? ಎಂಬ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅಲ್ಲದೆ, ಮಣ್ಣಿನ ಆರೋಗ್ಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಮಣ್ಣಿನಲ್ಲಿ ಯಾವ ಅಂಶ ಕಡಿಮೆಯಿದೆ ಎಂಬುದನ್ನು ತಿಳಿದು, ಅದನ್ನು ಹೆಚ್ಚಿಸುವ ಬಗ್ಗೆ ತಿಳಿಸಿಕೊಡಲಾಗುತ್ತದೆ. ತಾಲೂಕು ಮಟ್ಟದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2015-16 ರಿಂದ ಖುಷ್ಕಿ ಭೂಮಿ, ನೀರಾವರಿ ಭೂಮಿಗಳಲ್ಲಿನ ಮಣ್ಣಿನ ಫಲವತ್ತತೆ ಪರೀಕ್ಷೆ ನಡೆಸುತ್ತಿದೆ. ಅದರಂತೆ ರಾಜ್ಯದಲ್ಲಿ ಕೃಷಿ ಭೂಮಿ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಮಣ್ಣಿನಲ್ಲಿನ ಹೈಡ್ರೋಜನ್, ನೈಟ್ರೋಜನ್, ಫಾಸ್ಪರಸ್, ಮೈಕ್ರೋ ನ್ಯೂಟ್ರಿಯಂಟ್ ಹಾಗೂ ಪೊಟ್ಯಾಶಿಯಂ ಪ್ರಮಾಣವನ್ನು ಪತ್ತೆ ಮಾಡಿ ವರದಿ ಸಿದ್ಧಪಡಿಸಿದೆ. ಜತೆಗೆ ಮಾದರಿ ಪಡೆದ ರೈತರಿಗೆ ಅವರ ಕೃಷಿಭೂಮಿಯ ಮಣ್ಣಿನ ಆರೋಗ್ಯದ ಬಗ್ಗೆ ಗುರುತಿನ ಚೀಟಿ ನೀಡಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಮಣ್ಣಿನ ಮಾದರಿಯ ಪರೀಕ್ಷಾ ವರದಿ ಪ್ರಕಾರ 2015-16, 2016-17, ಹಾಗೂ 2018-19 ರಂತೆ 2 ವರ್ಷಕ್ಕೊಮ್ಮೆ ಮತ್ತು 2019 ರಲ್ಲಿ ಮಣ್ಣನ್ನು ಪರೀಕ್ಷೆಗೊಳಪಡಿಸಲಾಗಿದೆ. ಮೊದಲು ಎರಡು ಬಾರಿ ಮಾದರಿ ಸಂಗ್ರಹಿಸುವ ವೇಳೆ 10 ಹೆಕ್ಟೇರ್ ಖುಷ್ಠಿ ಭೂಮಿ ಹಾಗೂ 2.5 ಹೆಕ್ಟೇರ್ ನೀರಾವರಿ ಭೂಮಿಯನ್ನು ಗ್ರಿಡ್‌ಗಳಾಗಿ ವಿಂಗಡಿಸಲಾಗಿತ್ತು. ಇದರಂತೆ ತಲಾ 16.65 ಲಕ್ಷದಂತೆ ಒಟ್ಟು 33.30 ಲಕ್ಷ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಅವುಗಳಿಂದ ಒಟ್ಟು 1.71 ಲಕ್ಷ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ.
ಓದಿ :ಕನ್ನಡ ಹೋರಾಟಗಾರರ ಬಗ್ಗೆ ಗೌರವ ಇದೆ.. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತಪ್ಪಲ್ಲ.. ಸಚಿವ ಜೋಶಿ
ಕರಾವಳಿ, ಮಲೆನಾಡು ಭಾಗದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿದೆ. ವಾರ್ಷಿಕ 2 ಅಥವಾ 3 ಬೆಳೆ ಬೆಳೆಯುವ ಹಳೇ ಮೈಸೂರು ಪ್ರಾಂತ್ಯ, ಉತ್ತರ ಕರ್ನಾಟಕ, ಬಯಲಸೀಮೆ ಪ್ರದೇಶದಲ್ಲಿ ಫಲವತ್ತತೆ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಿದೆ. ಸದ್ಯ ಕೃಷಿಯಲ್ಲಿ ರಸಗೊಬ್ಬರದ ಬಳಕೆ ಹೆಚ್ಚಿದೆ. ಒಂದು ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಪದೇ ಪದೆ ರಸಗೊಬ್ಬರ ಬಳಸುವುದರಿಂದ ಫಲವತ್ತತೆ ಕುಸಿಯುತ್ತದೆ.
ಮಣ್ಣಿನ ಪರೀಕ್ಷಾ ಕೇಂದ್ರಗಳು ? : ಪ್ರತಿ ಜಿಲ್ಲೆಗೆ ಒಂದರಂತೆ, ಎಲ್ಲ ಕೃಷಿ ವಿವಿಗಳು ಸೇರಿ 63 ಹಾಗೂ ಬೆಳಗಾವಿಯಲ್ಲಿ 1 ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರ ಇದೆ. ಜೊತೆ ಗೆ 143 ಗ್ರಾಮೀಣ ಮಟ್ಟದ ಮಿನಿ ಮಣ್ಣು ಪರೀಕ್ಷಾ ಕೇಂದ್ರಗಳಿವೆ.
ಕೃಷಿ ಸಚಿವರ ಸಲಹೆ ಏನು? : ಮಣ್ಣನ್ನು ಜೀವಂತವಾಗಿಡಬೇಕು. ಮಣ್ಣನ್ನು ಜೀವ ವೈವಿಧ್ಯತೆಯಾಗಿರಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.
ಮಣ್ಣು ಉತ್ಪಾದನೆ ಆಗಲು ಸುಮಾರು 500 ರಿಂದ 700 ವರ್ಷಗಳು ಬೇಕಾಗುತ್ತದೆ. ಜೋರಾಗಿ ಮಳೆ ಬಂದರೆ ಫಲವತ್ತಾದ ಮೇಲ್ಮಣ್ಣು ಕೊಚ್ಚಿ ಹೋಗುತ್ತದೆ. ಇದರಿಂದ ಭೂಮಿಯಲ್ಲಿ ಫಲವತ್ತತೆ ನಾಶವಾಗುತ್ತದೆ. ಸಸ್ಯಗಳ ಸಂರಕ್ಷಣೆಗೆ 17 ಅಂಶಗಳು ಬೇಕಾಗುತ್ತದೆ. ಹಾಗಾಗಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಲು ರೈತರು ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯವಶ್ಯಕ. ಮಣ್ಣಿನ ಗುಣಮಟ್ಟವನ್ನು ಕಾಪಾಡಬೇಕೆಂದು ರೈತರಲ್ಲಿ ಸಚಿವರು ಮನವಿ ಮಾಡಿದರು.