ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ರಾಜ್ಯ ಸರ್ಕಾರದ ಮೇಲೆ ವಿವಿಧ ಸಮುದಾಯಗಳ ನಾಯಕರು ಒತ್ತಡ ಹೇರಲು ಮುಂದಾಗಿದ್ದಾರೆ.
ಪ್ರಮುಖವಾಗಿ ಒಕ್ಕಲಿಗ ಹಾಗೂ ಕ್ರೈಸ್ತ ನಿಗಮಗಳನ್ನು ಸ್ಥಾಪಿಸುವಂತೆ ಒತ್ತಡ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಒಕ್ಕಲಿಗ ನಿಗಮ ಸ್ಥಾಪನೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ.
ನಗರದ ಚಾಮರಾಜಪೇಟೆಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕುವೆಂಪು ಕಲಾ ಕ್ಷೇತ್ರದಲ್ಲಿ ಸಂಜೆ 4.30ಕ್ಕೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಚಂದ್ರಶೇಖರ್ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಮುದಾಯದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಮುದಾಯದ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಲಿದ್ದಾರೆ.
ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕಾಗಿ ಸರ್ಕಾರದ ಮೇಲೆ ಒತ್ತಾಯ ಮಾಡುವ ಉದ್ದೇಶದಿಂದಲೇ ಈ ಸಭೆ ಕರೆಯಲಾಗಿದೆ. ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಗಾಗಿಯೂ ಬೇಡಿಕೆ ಮುಂದಿರಲು ಇದೇ ಸಂದರ್ಭ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಒಂದೊಂದು ಸಮುದಾಯಗಳು ರಾಜ್ಯ ಸರ್ಕಾರದ ಮೇಲೆ ನಿಗಮ ಸ್ಥಾಪನೆಗಾಗಿ ಒತ್ತಡ ಹೇರುತ್ತಿದ್ದು, ಸರ್ಕಾರ ಇದಕ್ಕೆ ಯಾವ ರೀತಿ ಉತ್ತರ ನೀಡಲಿದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.