ಬೆಂಗಳೂರು: ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸುವ ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನ ವಿಫಲವಾಗಿದ್ದು, ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಕೇವಲ 8 ಜನ ಹಿರಿಯ ಕಾಂಗ್ರೆಸ್ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಹೆಚ್ಚಿದೆ.
ಜಾತಿವಾರು, ಪ್ರಾದೇಶಿಕವಾರು ಹಾಗೂ ಹಿರಿತನದ ಆಧಾರದ ಮೇಲೆ ಮೊದಲ ಹಂತದಲ್ಲಿ 8 ಜನ ಶಾಸಕರಿಗೆ ಸಚಿವರಾಗುವ ಭಾಗ್ಯ ದೊರೆತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಕೆಪಿಸಿಸಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಮಾಜಿ ಸಚಿವ ಕೆ. ಜೆ. ಜಾರ್ಜ್, ಜಮೀರ್ ಅಹ್ಮದ್ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸಚಿವ ಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿತರು ಇರುವುದರಿಂದ ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆನ್ನುವ ಉದ್ದೇಶದಿಂದ ಬೆರಳೆಣಿಕೆಯ ಶಾಸಕರನ್ನು ಮಾತ್ರ ಸಚಿವರನ್ನಾಗಿ ನೇಮಕ ಮಾಡಲು ದೆಹಲಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಸಭೆಯಲ್ಲಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಸಿಎಂ, ಡಿಸಿಎಂ ಸೇರಿದಂತೆ 28 ಜನ ಶಾಸಕರನ್ನು ಮಂತ್ರಿಗಳನ್ನಾಗಿ ನೇಮಕ ಮಾಡಲು ತೀರ್ಮಾನ ತಗೆದುಕೊಳ್ಳಲಾಗಿತ್ತು. ಆದರೆ, ಸಚಿವ ಪದವಿ ಸಿಗದವರಿಂದ ಭಿನ್ನಮತ ಎದುರಾಗುವ ಅಪಾಯದ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಪೂರ್ಣ ಪ್ರಮಾಣದ ಸಂಪುಟ ರಚಿಸದೇ ಇರುವ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ. ಸಚಿವ ಆಕಾಂಕ್ಷಿಗಳ ಬಂಡಾಯ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ 8 ಜನ ಶಾಸಕರನ್ನು ಮೊದಲ ಹಂತದಲ್ಲಿ ಸಚಿವರನ್ನಾಗಿ ನೇಮಕ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ ಎಂಬ ಮಾಹಿತಿ ತಿಳಿದಿದೆ.
ಇಂದು ಪ್ರಮಾಣ ವಚನ ಸ್ವೀಕರಿಸುವ ಕಾಂಗ್ರೆಸ್ನ ಕಲಿಗಳು:
- ಸಿದ್ದರಾಮಯ್ಯ- ಮಾಜಿ ಮುಖ್ಯಮಂತ್ರಿ
- ಡಿ.ಕೆ.ಶಿವಕುಮಾರ್- ಕೆಪಿಸಿಸಿ ಅಧ್ಯಕ್ಷ
- ರಾಮಲಿಂಗಾರೆಡ್ಡಿ- ಕೆಪಿಸಿಸಿ ಕಾರ್ಯಾಧ್ಯಕ್ಷ
- ಸತೀಶ್ ಜಾರಕಿಹೊಳಿ- ಕೆಪಿಸಿಸಿ ಕಾರ್ಯಾಧ್ಯಕ್ಷ
- ಎಂ.ಬಿ.ಪಾಟೀಲ್- ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
- ಕೆ.ಹೆಚ್.ಮುನಿಯಪ್ಪ- ಮಾಜಿ ಕೇಂದ್ರ ಸಚಿವ
- ಡಾ.ಜಿ.ಪರಮೇಶ್ವರ್- ಮಾಜಿ ಉಪ ಮುಖ್ಯಮಂತ್ರಿ
- ಪ್ರಿಯಾಂಕ ಖರ್ಗೆ- ಸಾಮಾಜಿಕ ಜಾಲತಾಣದ ಮುಖ್ಯಸ್ಥ
- ಕೆ.ಜೆ.ಜಾರ್ಜ್- ಮಾಜಿ ಸಚಿವ
- ಜಮೀರ್ ಅಹ್ಮದ್ ಖಾನ್- ಮಾಜಿ ಸಚಿವ
ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ: ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮದ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ ಈ ಎಲ್ಲಾ ಮುಖಂಡರಿಗೆ ಶುಕ್ರವಾರ ರಾತ್ರಿ ಮಾಹಿತಿ ನೀಡಲಾಗಿದೆ.
ದೆಹಲಿಯಿಂದ ಶನಿವಾರ ಬೆಳಿಗ್ಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ದೆಹಲಿಗೆ ತೆರಳಿದ್ದ ಕಾಂಗ್ರೆಸ್ ಮುಖಂಡರು ಆಗಮಿಸಲಿದ್ದಾರೆ. ಇಂದು ಬೆಳಿಗ್ಗೆ ರಾಜಭವನಕ್ಕೆ ಸಚಿವರಾಗಿ ಪ್ರಮಾಣ ಚವನ ಸ್ವೀಕರಿಸಲಿರುವ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳಿಸಲಿದ್ದಾರೆ. ಮುಂದಿನ ವಾರ ಅಥವಾ ಈ ತಿಂಗಳ ಅಂತ್ಯದಲ್ಲಿ ಎರಡನೇ ಹಂತದಲ್ಲಿ ಬಾಕಿ ಉಳಿದ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಶೆ: ಇಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ತಾವು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇವೆ ಎನ್ನುವ ನಿರೀಕ್ಷೆಯಲ್ಲಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಹಳ ನಿರಾಶೆಯಾಗಿದೆ. ಕೆಲವು ಮುಖಂಡರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಿದ್ಧರಾಗಿ ಬರಲು ದೂರವಾಣಿ ಕರೆ ಮಾಡಿ ತಿಳಿಸಲಾಗಿದೆಯಂತೆ. ಆದರೆ, ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿರುವುದು ಬಹಳಷ್ಟು ಶಾಸಕರಲ್ಲಿ ನಿರಾಶೆ ಮೂಡಿಸಿದೆ.
ಇದನ್ನೂ ಓದಿ: ಸಿಎಂ ಪದಗ್ರಹಣ: ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ