ಬೆಂಗಳೂರು: ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವ ಬದಲು ಕಾಯ್ದೆಯ ನಿಯಮಗಳನ್ನೇ ಮರು ಪರಿಶೀಲಿಸುವ ಸಲಹೆ ನೀಡಿದ್ದ ಡಿಸಿಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸಿ ಮಾಲಿನ್ಯ ಉಂಟು ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲು ಕೋರಿ ಗಿರೀಶ್ ಭಾರದ್ವಾಜ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರಿ ವಕೀಲರು ಪೀಠಕ್ಕೆ, ನಗರ ಪೊಲೀಸ್ ಆಯುಕ್ತರ ಕಚೇರಿಯ ಗುಪ್ತಚರ ವಿಭಾಗದ ಡಿಸಿಪಿ ಸಿದ್ಧಪಡಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಅದರಲ್ಲಿ, ದೂರುಗಳನ್ನು ಆಧರಿಸಿ ಧಾರ್ಮಿಕ ಕೇಂದ್ರಗಳ ಸ್ಥಳ ಪರಿಶೀಲಿಸಲಾಗಿದೆ. ಅವುಗಳ ಉಸ್ತುವಾರಿಗಳಿಗೆ ಶಬ್ದ ಮಾಲಿನ್ಯ ಮಾಡದಂತೆ ಸೂಚಿಸಲಾಗಿದೆ. ಕಾಯ್ದೆಯನ್ನು 2000 ಇಸವಿಯಲ್ಲಿ ರೂಪಿಸಿದ್ದು, ವಾಹನಗಳು ಹೆಚ್ಚಾಗಿರುವ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಮರು ಪರಿಶೀಲಿಸುವ ಅಗತ್ಯವಿದೆಯೆಂದು ಉಲ್ಲೇಖಿಸಲಾಗಿತ್ತು.
ಪ್ರಮಾಣಪತ್ರ ಗಮನಿಸಿದ ಪೀಠ ಡಿಸಿಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಿಯಮಗಳನ್ನು ಉಲ್ಲಂಘಿಸಿದವರನ್ನು ಶಿಕ್ಷಿಸುವ ಬದಲು ಕಾನೂನು ಪರಿಶೀಲಿಸುವಂತೆ ಮನವಿ ಮಾಡಿದ್ದೀರಿ. ದೂರು ಬಂದಾಗ ಸರಿಯಾಗಿ ಪರಿಶೀಲಿಸಿಲ್ಲ. ಪರಿಸರ ಸಂರಕ್ಷಣಾ ಕಾಯ್ದೆ ಅಡಿ ತಪ್ಪಿತಸ್ಥರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಿಲ್ಲ. ಡಿಜಿ-ಐಜಿಪಿ ಸೂಚನೆಯಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. ಇದೀಗ ಮತ್ತೊಂದು ಕಾರಣ ಹುಡುಕಿಕೊಂಡು ಬಂದಿದ್ದೀರಿ. ಪ್ರಮಾಣ ಪತ್ರವನ್ನು ನೋಡಿದರೆ ಡಿಸಿಪಿ ಅನಧಿಕೃತ ಧ್ವನಿವರ್ಧಕಗಳ ಬಳಕೆಯನ್ನು ಒಪ್ಪಿಕೊಂಡಿದ್ದಾರೆ ಎಂದೇ ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಸಕ್ಷಮ ಪ್ರಾಧಿಕಾರಿಯಾದ ಡಿಸಿಪಿ ನಿಯಮ ಪಾಲಿಸುವ ಬದಲು ನಿಯಮಗಳನ್ನು ಮರು ಪರಿಶೀಲಿಸುವ ಅಗತ್ಯವಿದೆ. ವಾಹನಗಳ ಸಂಚಾರದಿಂದ ಧಾರ್ಮಿಕ ಕೇಂದ್ರಗಳಿರುವ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚುತ್ತಿದೆ ಎಂದಿದ್ದಾರೆ. ವಾಹನ ಸಂಚಾರ ಹೆಚ್ಚಿರುವ ಸಮಯದಲ್ಲಿ ಪರೀಕ್ಷಿಸುವ ಬದಲು ಮುಂಜಾನೆ ಪರೀಕ್ಷಿಸಬಹುದಿತ್ತಲ್ಲವೇ? ಎಂದು ಪೀಠ ಕಟುವಾಗಿ ಪ್ರಶ್ನಿಸಿತು. ಈ ವೇಳೆ ಸರ್ಕಾರಿ ವಕೀಲರು, ಪ್ರಮಾಣ ಪತ್ರವನ್ನು ಹಿಂಪಡೆದು ಹೊಸದಾಗಿ ಸಲ್ಲಿಸುವುದಾಗಿ ತಿಳಿಸಿದರು.
ಇದನ್ನು ಒಪ್ಪದ ಪೀಠ ಅರ್ಜಿ ಹಾಗೂ ಅರ್ಜಿ ಕುರಿತ ನ್ಯಾಯಾಲಯದ ಆದೇಶಗಳು, ಡಿಸಿಪಿಯ ಪ್ರಮಾಣಪತ್ರವನ್ನು ನಗರ ಪೊಲೀಸ್ ಆಯುಕ್ತರಿಗೆ ಒದಗಿಸಬೇಕು. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಮತ್ತು ಪೊಲೀಸರ ಈ ನಡವಳಿಕೆಗೆ ಆಯುಕ್ತರು ಜುಲೈ 1ರೊಳಗೆ ಖುದ್ದಾಗಿ ಪ್ರಮಾಣಪತ್ರ ಸಲ್ಲಿಸಬೇಕು. ಶಬ್ದ ಮಾಲಿನ್ಯ ಕುರಿತು ದೂರು ಸ್ವೀಕರಿಸಿರುವ ಪೊಲೀಸ್ ಠಾಣೆಗಳಿಗೆ ಮಾಲಿನ್ಯ ಅಳೆಯುವ ಮಾಪಕ ಒದಗಿಸಲಾಗಿದೆ? ಅವುಗಳ ಕಾರ್ಯ ನಿರ್ವಹಣೆ ಸ್ಥಿತಿ ಹೇಗಿದೆ? ಅವುಗಳ ಬಳಕೆ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಗಿದೆಯೇ? ಎಂಬ ಬಗ್ಗೆ ವಿವರಣೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.