ಬೆಂಗಳೂರು : ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳವುದಾಗಿ ಸಂದೇಶಗಳು ಬರಲಾರಂಭಿಸಿದೆ ಎಂದು ಭರತ್ ಶೆಟ್ಟಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಒಸಾಮಾ ಶಾ ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸ್ಆಪ್ ಮೂಲಕ 'ಮಸಿ ಬಳಿದು ಅವಮಾನಿಸಿದ್ದಕ್ಕೆ ತಿರುಗೇಟು ನೀಡುತ್ತೇವೆ, ನಿನ್ನ ಸಮಯ ಶುರುವಾಗಿದೆ' ಎಂದು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ರೈತ ಮುಖಂಡ ರಾಕೇಶ್ ಟಿಕಾಯತ್ ವಶಕ್ಕೆ ಪಡೆದ ದೆಹಲಿ ಪೊಲೀಸರು
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಭರತ್ ಶೆಟ್ಟಿ, "ಕಳೆದ ಬಾರಿ ದೇಶದ ರೈತ ನಾಯಕ ಎಂದು ಹೇಳಿಕೊಂಡು ರಾಕೇಶ್ ಟಿಕಾಯತ್ ಭ್ರಷ್ಟಾಚಾರದಲ್ಲಿ ತೊಡಗಿರುವುದು ಖಾಸಗಿ ಮಾಧ್ಯಮದಲ್ಲಿ ಪ್ರಸಾರವಾಯ್ತು. ಅಮಾಯಕ ರೈತರನ್ನು ಕರೆದುಕೊಂಡು ದೆಹಲಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ್ರು. ಟಿಕಾಯತ್ ಮೇಲೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಸಾಮಾ ಶಾ ಎಂಬಾತ ನನಗೆ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ. ಕಳೆದ ಒಂದು ತಿಂಗಳಿಂದ ಹೀಗೆ ಮೆಸೇಜ್ ಮಾಡಿದ್ದಾನೆ. ನನ್ನ ಸಾಮಾಜಿಕ ಜಾಲತಾಣವನ್ನು ಚೇತನ್ ಶೆಟ್ಟಿ ಎನ್ನುವವರು ನೋಡಿಕೊಳ್ಳುತ್ತಿದ್ದಾರೆ. ವಾಟ್ಸ್ಆ್ಯಪ್ ಚಾಟಿಂಗ್ ಮೂಲಕ ಬೆದರಿಕೆ ಹಾಕುತ್ತಿದ್ದು, ನೀನು ಎಲ್ಲಿ ಓಡಾಡುತ್ತಿದ್ದೀಯಾ?, ನಿನ್ನ ಕುಟುಂಬ ಎಲ್ಲಿದೆ?, ನಿನ್ನ ಜೀವ ತೆಗೆಯಬೇಕು ಎಂದು ಹಾಕಿದ್ದಾನೆ. ಹಾಗಾಗಿ, ನಾನು ಕಾನೂನಿನ ಮೂಲಕ ಅವನಿಗೆ ಉತ್ತರ ನೀಡಲು ಬಂದಿದ್ದೇನೆ. ಜೊತೆಗೆ ನನಗೆ ಭದ್ರತೆ ಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡುತ್ತೇನೆ" ಎಂದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್, ಯುಧವೀರ್ ಮೇಲೆ ಮಸಿ ಎರಚಿದ ಕಿಡಿಗೇಡಿಗಳು
ಕಳೆದ ವರ್ಷ ಮೇ 30 ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಚಳವಳಿ - ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಭಾಗಿಯಾಗಿದ್ದರು. ಸಭೆಯಲ್ಲಿ ಟಿಕಾಯತ್ ಮೇಲೆ ಮಸಿ ಎರಚಲಾಗಿತ್ತು. ಪ್ರಕರಣ ಸಂಬಂಧ ಭರತ್ ಶೆಟ್ಟಿ ಸಹಿತ ನಾಲ್ವರನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಮೋದಿ ಡೌನ್ ಡೌನ್ ಎಂದ ಬಾಡಿಗೆ ಮಹಿಳಾ ಕಾರ್ಯಕರ್ತೆ ಎಡವಟ್ಟು.. ಭರತ್ ಶೆಟ್ಟಿ ನಗೆಪಾಟಲಿಗೀಡು..
ಅಂದು ರಾಷ್ಟ್ರೀಯ ರೈತ ಮುಖಂಡರ ಮೇಲೆ ಹಲ್ಲೆಯಾಗುತ್ತಿದ್ದಂತೆ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಜಿಲ್ಲೆಗಳ ರೈತ ಮುಖಂಡರೆಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದರು. ನ್ಯಾಯಕ್ಕಾಗಿ ಘೋಷಣೆ ಕೂಗಿ, ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಇದನ್ನೂ ಓದಿ : ರಾಷ್ಟ್ರೀಯ ರೈತ ಮುಖಂಡರ ಮೇಲೆ ಮಸಿ ಬಳಿದ ಪ್ರಕರಣ : ಮೂವರನ್ನು ವಶಕ್ಕೆ ಪಡೆದ ಪೊಲೀಸರು