ನಮ್ಮ ಮಗನ ಹತ್ರ ಗನ್ ಇದೆ, ಏನಾದ್ರೂ ಮಾಡ್ಕೋತಾನೆ: ಚಿಪ್ಪಿ ಕುಟುಂಬಸ್ಥರಿಂದ ಪೊಲೀಸರಿಗೆ ಬೆದರಿಕೆ - ಬೆಂಗಳೂರು ಅಪ್ಡೇಟ್
ಸದ್ಯ ಚಿಪ್ಪಿ ಎಲ್ಲಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಹಾಗಾಗಿ ಆತನ ಮನೆಯವರು, ಸ್ನೇಹಿತರು, ಕುಟುಂಬಸ್ಥರ ಮೇಲೆ ನಿಗಾ ಇಟ್ಟು ಆತನ ಚಲನವಲನ ಗಮನಿಸಲು ಕೂಡ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು: ಡ್ರಗ್ಸ್ ಪೂರೈಕೆ ಜಾಲ ಬೆನ್ನತ್ತಿರುವ ಸಿಸಿಬಿ ಪೊಲೀಸರು ಪ್ರಕರಣದ ಎ1 ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿಗಾಗಿ ಶೋಧ ಮುಂದುವರೆಸಿದ್ದಾರೆ. ಆದರೆ ಸದ್ಯ ಚಿಪ್ಪಿ ಎಲ್ಲಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಹಾಗಾಗಿ ಆತನ ಮನೆಯವರು, ಸ್ನೇಹಿತರು, ಕುಟುಂಬಸ್ಥರ ಮೇಲೆ ನಿಗಾ ಇಟ್ಟು ಆತನ ಚಲನವಲನ ಗಮನಿಸಲು ಕೂಡ ಮುಂದಾಗಿದ್ದಾರೆ. ಪ್ರಕರಣದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದು, ಈತನ ಸೂಚನೆಯಂತೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎನ್ನಲಾಗಿದೆ.
ಈತ ನಟಿ ರಾಗಿಣಿಯ ಜೊತೆ ಬಹಳ ಆತ್ಮೀಯತೆಯಿಂದ ಇದ್ದು, ಡ್ರಗ್ಸ್ ಪೂರೈಕೆ ಹಾಗೂ ಸೇವನೆ ಮಾಡುತ್ತಿದ್ದನಂತೆ. ಆದರೆ ಸದ್ಯ ಈತ ತಲೆಮರೆಸಿಕೊಂಡಿರುವ ಕಾರಣ ಸಿಟಿ ಬಿಟ್ಟು ವಿದೇಶಕ್ಕೆ ತೆರಳಬಾರದೆಂದು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈತನ ಮನೆಯವರು ನೀರೀಕ್ಷಣಾ ಜಾಮೀನುಗೆ ಅರ್ಜಿ ಹಾಕಿ ಆತನೇ ಪೊಲೀಸರ ಎದುರು ಶರಣಾಗುತ್ತನೆ. ಬಂಧಿಸುವ ಅವಶ್ಯಕತೆ ಇಲ್ಲಾವೆಂದು ತಿಳಿಸಿದ್ದರು.
ಆದರೆ ನ್ಯಾಯಾಲಯ ಗಂಭೀರ ಪ್ರಕರಣವಾದ ಕಾರಣ ನೀರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿತ್ತು. ಹಾಗೆಯೇ ಆತ ತಲೆಮರೆಸಿಕೊಂಡಿರುವ ಮಾಹಿತಿ ವಕೀಲರಿಗೆ ಹಾಗೂ ಪೋಷಕರಿಗೆ ಗೊತ್ತಿರುವ ಕಾರಣ ಪೋಷಕರ ವಿಚಾರಣೆಯನ್ನ ಸಿಸಿಬಿ ನಡೆಸಿ ಶಿವಪ್ರಕಾಶ್ ಚಿಪ್ಪಿ ಇರುವ ಜಾಗ ತಿಳಿಸುವಂತೆ ಸೂಚಿಸಿದ್ದಾರೆ.
ಸಿಸಿಬಿ ಅಧಿಕಾರಿಗಳಿಗೆ ಪೋಷಕರಿಂದ ಬೆದರಿಕೆ: ಸಿಸಿಬಿ ಪೊಲೀಸರು ನಗರದಲ್ಲಿರುವ ಚಿಪ್ಪಿ ಮನೆಗೆ ಹೋಗಿ ಮಾಹಿತಿ ಕೊಡುವಂತೆ ಕೇಳಿದ್ದಾರೆ. ಸದ್ಯ ಚಿಪ್ಪಿ ತಲೆಮರೆಸಿಕೊಂಡಿರುವ ಮಾಹಿತಿ ಪೋಷಕರಿಗೆ ಗೊತ್ತಿರುವ ಕಾರಣ ಮನೆಗೆ ಹೋಗಿ ಮಾಹಿತಿ ಕೇಳಿದ್ದಾರೆ. ಆದರೆ ಪೋಷಕರು ತನಿಖೆಗೆ ಸಹಕಾರ ನೀಡದೆ ಮೊಂಡುತನದಿಂದ ನನ್ನ ಮಗ ಮನೆಯಲ್ಲಿರುವ ರಿವಾಲ್ವಾರ್ ತೆಗೆದುಕೊಂಡು ಹೋಗಿದ್ದಾನೆ. ನೀವು ಈ ರೀತಿ ಆತನ ಹುಡುಕಾಟ ಮಾಡಿದರೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಸಿಸಿಬಿ ಪೊಲೀಸರಿಗೆ ಬೆದರಿಸುವ ಪ್ರಯತ್ನ ಮಾಡಿದ್ದಾರಂತೆ.
ಇನ್ನು ಸಿಸಿಬಿ ಪೊಲೀಸರು ಮೊಂಡು ಬೆದರಿಕೆಗೆ ಕ್ಯಾರೆ ಅನ್ನದೆ ಆತ್ಮಹತ್ಯೆ ಮಾಡಿಕೊಂಡರೆ ಯುಡಿಆರ್ ಕೇಸ್ ದಾಖಲಾಗುತ್ತೆ. ಮರಣೋತ್ತರ ಪರೀಕ್ಷೆ ವೇಳೆ ಸತ್ಯಾಂಶ ಬಯಲಾಗುತ್ತದೆ. ನಿಮ್ಮ ಮಗ ಡ್ರಗ್ಸ್ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದು, ತನಿಖೆಗೆ ಸಹಕಾರ ನೀಡುವುದು ಅನಿವಾರ್ಯವಾಗಿದೆ ಎಂದು ವಾರ್ನ್ ಮಾಡಿದ್ದಾರೆ.
ಹಾಗೆಯೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಕಾರಣ ಇನ್ಸ್ಪೆಕ್ಟರ್ವೊಬ್ಬರು ಸಿಸಿಬಿ ಇನ್ಸ್ಪೆಕ್ಟರ್ಗೆ ಒತ್ತಡ ಹಾಕಿ ಶಿವಪ್ರಕಾಶ್ ಚಿಪ್ಪಿ ಪರ ವಕಾಲತ್ತು ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ಸದ್ಯ ಸಹಾಯ ಮಾಡಲು ಮುಂದಾದ ಇನ್ಸ್ಪೆಕ್ಟರ್ ಬಳಿಯಿಂದಲೇ ಶಿವಪ್ರಕಾಶ್ ಚಿಪ್ಪಿಯನ್ನ ಖೆಡ್ಡಾಕ್ಕೆ ಕೆಡವಲು ಸಿಸಿಬಿ ಮುಂದಾಗಿದೆ. ಯಾಕಂದ್ರೆ ಇನ್ಸ್ಪೆಕ್ಟರ್ ಜೊತೆ ಚಿಪ್ಪಿ ಕುಟುಂಬಸ್ಥರು ನಿರಂತರ ಸಂಪರ್ಕದಲ್ಲಿದ್ದರಂತೆ. ಈ ಕಾರಣಕ್ಕಾಗಿ ಸದ್ಯ ಶಿವಪ್ರಕಾಶ್ ಚಿಪ್ಪಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಈತನ ಬಂಧನದಿಂದ ಹಲವಾರು ಮಾಹಿತಿ ಬಯಾಲಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ನೀರಿಕ್ಷೆ ಇದೆ.