ಬೆಂಗಳೂರು: ಇತಿಹಾಸ ಪುಸ್ತಕದಿಂದಲೇ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕ್ತೇವೆ ಅನ್ನೋದು ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಅನ್ನೋದನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇತಿಹಾಸ ಪುಸ್ತಕದಿಂದ ಟಿಪ್ಪು ಪಠ್ಯ ತೆಗೆದು ಹಾಕುವ ಬಗ್ಗೆ ಮಾತನಾಡಿದ ಅವರು, ಯಾರಿಗೆ ತಿಳುವಳಿಕೆ ಕಡಿಮೆ ಇರುತ್ತದೆಯೋ, ಇತಿಹಾಸದ ಬಗ್ಗೆ ಜ್ಞಾನ ಇರುವುದಿಲ್ಲವೋ ಅಂತವರು ಮಾತ್ರ ಇಂಥ ಹೇಳಿಕೆ ಕೊಡಲು ಸಾಧ್ಯ. ದಾಖಲೆ ಪ್ರಮಾಣದ ಕೆಲಸಗಳು ಟಿಪ್ಪು ಕಾಲದಲ್ಲಿ ಆಗಿವೆ. ಅಬ್ದುಲ್ ಕಲಾಂ ಹೇಳಿದ್ರು ಟಿಪ್ಪು ಕ್ಷಿಪಣಿ ತಂತ್ರಜ್ಞಾನದಲ್ಲಿ ನಿಪುಣರಾಗಿದ್ದರು ಅಂತ. ಈ ಬಗ್ಗೆ ಯಡಿಯೂರಪ್ಪಗೆ ಗೊತ್ತಿದೆಯಾ? ಯಡಿಯೂರಪ್ಪ ಈ ಬಗ್ಗೆ ಓದಿಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ಏನು ಇತಿಹಾಸ ತಜ್ಞರಾ? ಯಾವುದೋ ಸರ್ವಾಧಿಕಾರಿ ಸರ್ಕಾರ ಅಂದುಕೊಂಡಿದ್ದೀರಾ? ಸಾವರ್ಕರ್ ಬಗ್ಗೆ ನಮಗೂ ಬೇರೆಯದೇ ಅಭಿಪ್ರಾಯ ಇದೆ. ಹಾಗಂತ ನಮ್ಮ ಸರ್ಕಾರ ಬಂದಾಗ ಸಾವರ್ಕರ್ ವಿಚಾರವನ್ನು ಇತಿಹಾಸದ ಪುಸ್ತಕದಿಂದ ತೆಗೆದು ಹಾಕಬೇಕಾ? ಟಿಪ್ಪು ಅನೇಕ ದೇವಸ್ಥಾನಗಳಿಗೆ ಭೂಮಿ ಕೊಟ್ಟಿದ್ದಾರೆ, ಸಹಾಯ ಮಾಡಿದ್ದಾರೆ. ಇಂಥ ಮಾತುಗಳು ಸಿಎಂಗೆ ಶೋಭೆ ತರೋದಿಲ್ಲ. ನಾನು ನಿಮಗೆ ತಿಳುವಳಿಕೆ ಇದೆ ಅಂದುಕೊಂಡಿದ್ದೆ. ಅತ್ಯಂತ ನಿರ್ಲಕ್ಷ್ಯ ಇರುವ ವ್ಯಕ್ತಿ ಮಾತ್ರ ಹೀಗೆ ಮಾತನಾಡಲು ಸಾಧ್ಯ ಎಂದರು.
ನಿಮ್ಮ ಕೋಮುವಾದಿ ಸಿದ್ಧಾಂತವನ್ನು ಜನರ ಮೇಲೆ ಹೇರಬೇಡಿ. ಇವತ್ತಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಟಿಪ್ಪುವನ್ನು ಹೊಗಳಿದ್ದಾರೆ. ಇತಿಹಾಸವನ್ನು ಮುಕ್ತವಾಗಿ ನೋಡಬೇಕು. ಗುಜರಾತ್ ನರಮೇಧ ಆದಾಗ ಅಲ್ಲಿನ ಮುಖ್ಯಮಂತ್ರಿ ಯಾರಾಗಿದ್ರು? ಎಲ್ಲಾ ಪ್ರಶ್ನೆಗಳು ಮುಕ್ತವಾಗಿ ಚರ್ಚೆಯಾಗಲಿ. ಟಿಪ್ಪು ವಿಚಾರ ಮತ್ತಷ್ಟು ಚರ್ಚೆಗೆ ಬರೋದಕ್ಕೆ, ಪ್ರಖ್ಯಾತವಾಗುವುದಕ್ಕೆ ನೀವೇ ಅವಕಾಶ ಮಾಡಿಕೊಡ್ತಿದ್ದೀರಿ ಎಂದರು.
ಜೆಡಿಎಸ್ ಇತಿಹಾಸ ಗೊತ್ತಿದೆ: ಜೆಡಿಎಸ್ ಇತಿಹಾಸವನ್ನು ನೋಡಿದ್ದೇವೆ. ಅವರಿಗೆ ಬಿಜೆಪಿ ಜೊತೆ ಹೋಗಿ ಅಭ್ಯಾಸವಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಬೆಳವಣಿಗೆ ನೋಡೋದಾದರೆ ಯಾರು ತಪ್ಪು ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗಾದರೂ ಬೆಂಬಲ ಕೊಡಲಿ. ಜೆಡಿಎಸ್ಗೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕುಮಾರಸ್ವಾಮಿ ಹೇಳಿಕೆಗಳಿಗೆಲ್ಲಾ ನಾನು ಪ್ರತಿಕ್ರಿಯೆ ಕೊಡುವ ಪ್ರಯತ್ನ ಮಾಡಲ್ಲ ಎಂದು ಖಾರವಾಗಿ ನುಡಿದರು.