ಬೆಂಗಳೂರು: ನಮ್ಮ ದೇಶಕ್ಕೆ ಹೊರಗಿನಿಂದ ಮಹಿಳಾ ಉದ್ಯೋಗಿಗಳು ಬಂದು ಯಶಸ್ವಿಯಾಗುತ್ತಿರುವಂತೆ ನಮ್ಮ ನಾಡಿನ ಮಹಿಳೆಯರೂ ವಿದೇಶದಲ್ಲಿ ಯಶಸ್ವಿ ಉದ್ಯಮಿಗಳಾಗಬೇಕು. ಇಲ್ಲಿನ ಸ್ತ್ರೀಶಕ್ತಿ ಸಂಘಗಳಿಂದ ತಯಾರಾದ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗಬೇಕು. ಆ ರೀತಿ ನಮ್ಮ ಮಹಿಳಾ ಉದ್ಯಮಿಗಳು ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ರಾಜ್ಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸುಮಂಗಲಿ ಸೇವಾ ಆಶ್ರಮದ ಸಂಯುಕ್ತಾಶ್ರಯದಲ್ಲಿ ಕುಮಾರಕೃಪಾ ರಸ್ತೆಯ ಬಳಿ ಇರುವ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಸ್ವಯಂಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀಶಕ್ತಿ ಸಬಲೀಕರಣ ಆಗಬೇಕು: ವಿದೇಶಿ ಮಹಿಳೆಯರು ನಮ್ಮ ದೇಶಕ್ಕೆ ಬಂದು ಕಂಪನಿ ಸ್ಥಾಪಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಸ್ತ್ರೀಶಕ್ತಿ ಕೂಡ ಸಬಲೀಕರಣ ಆಗಬೇಕು. ಹೇಗೆ ವಿದೇಶದ ವಸ್ತುಗಳು ಇಲ್ಲಿ ಮಾರಾಟವಾಗುತ್ತಿವೆಯೋ ಆ ರೀತಿ ಇಲ್ಲಿನ ಸ್ತ್ರೀಶಕ್ತಿ ಸಂಘಟನೆಗಳಿಂದ ತಯಾರಾಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗಬೇಕು. ಆಗ ನಮ್ಮ ಆರ್ಥಿಕತೆಗೆ ಬಹಳ ದೊಡ್ಡ ಶಕ್ತಿ ಬರಲಿದೆ ಎಂದರು.
ಮಹಿಳೆಯರ ದುಡಿಮೆಗೆ ತಕ್ಕ ಬೆಲೆ ಸಿಗಲಿ: ಮಹಿಳೆಯರಿಗೆ ಯೋಗ್ಯವಾಗಿರುವ ಗೌರವ ಮತ್ತು ಸ್ಥಾನ ಇನ್ನೂ ಸಿಕ್ಕಿಲ್ಲ. ಅವರ ದುಡಿಮೆಗೆ ನಾವು ಬೆಲೆ ಕೊಟ್ಟಾಗ ಮಾತ್ರ ಅವರಿಗೆ ಆ ಸ್ಥಾನ ಸಿಗಲಿದೆ. ಅವರ ದುಡಿಮೆಗೆ ಎಲ್ಲಿಯವರೆಗೆ ಬೆಲೆ ಇರುವುದಿಲ್ಲವೋ ಅಲ್ಲಿಯವರೆಗೂ ಅವರು ಸ್ವಾವಲಂಬಿಯಾಗಿರುವುದಿಲ್ಲ. ಹೀಗಾಗಿ ಅವರಿಗೆ ಕಾರ್ಮಿಕ ಸ್ವಾತಂತ್ರ್ಯ ಬಂದಾಗ ಖಂಡಿತವಾಗಿ ಸಾಮಾಜಿಕ, ಶೈಕ್ಷಣಿಕ ಎಲ್ಲಾ ಸ್ವಾತಂತ್ರ್ಯಗಳು ಮಹಿಳೆಯರಿಗೆ ಲಭಿಸಲಿವೆ. ಈ ಹಿನ್ನೆಲೆ ಸೇವಾ ಸಂಸ್ಥೆಗಳು ದೊಡ್ಡ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ಆರ್ಥಿಕ ನೆರವು ನೀಡುವ ಯೋಜನೆ:ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಆ್ಯಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್‍ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್ ನಂತಹ ಆನ್‍ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದು ತಿಳಿಸಿದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದ ಸಿಎಂ
ನೀವು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಮೊದಲು ನೀವು ಅನುಭವಿಸಿ. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ, ಸೇವಾ ಸಂಸ್ಥೆಗಳ ಮುಖಾಂತರ ಜನರಿಗೆ ಸಹಾಯ ಮಾಡಿದ್ದೇವೆ, ಅನಾಥರಿಗೆ, ಬಡವರಿಗೆ ಸಹಾಯ ಮಾಡಿದ್ದೇವೆ ಎನ್ನುವುದನ್ನು ನೀವು ಅನುಭವಿಸಿಕೊಂಡರೆ ನಿಮ್ಮ ಪ್ರೇರಣಾ ಶಕ್ತಿ ದುಪ್ಪಟ್ಟಾಗಲಿದೆ. ಪ್ರೇರಣಾ ಶಕ್ತಿ ಹೊರಗೆಲ್ಲೂ ಇಲ್ಲ ನಿಮ್ಮೊಳಗೆ ಇರಲಿದೆ. ನಮ್ಮ ಪ್ರೇರಣೆಯೇ ನಮ್ಮ ಸಂಕಲ್ಪ, ನಮ್ಮ ಸಂಕಲ್ಪವೇ ನಮ್ಮ ಗುರಿ ತಲುಪಲು ಸಹಕಾರಿಯಾಗಲಿದೆ.
ಸಹಾಯ ಮಾಡಲು ಸರ್ಕಾರ ಸಿದ್ಧ: ಮಹಿಳಾ ಸಂಘಗಳು ಈಗ ಮಾಡುತ್ತಿರುವ ಕೆಲಸವನ್ನು ಮತ್ತಷ್ಟು ಉನ್ನತಕ್ಕೆ ಕೊಂಡೊಯ್ಯಲು ಕ್ರಿಯಾಯೋಜನೆ ರೂಪಿಸಿಕೊಳ್ಳುವ ಅಗತ್ಯವಿದೆ. ಪ್ರತಿವರ್ಷ ಒಂದು ಗುರಿಯನ್ನು ಇರಿಸಿಕೊಳ್ಳಿ, ಅದಕ್ಕೆ ಸರ್ಕಾರ ಸಹಕಾರ ನೀಡಲಿದೆ. ನೀವು ಗುರಿ ಇರಿಸಿಕೊಂಡು ಬಂದರೆ ಏನೆಲ್ಲಾ ಸಹಾಯ ಮಾಡಬೇಕೋ ಅದನ್ನೆಲ್ಲಾ ಮಾಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಶೇ.30ರಷ್ಟು ಜನರ ಕೊಡುಗೆ: ನಮ್ಮ ರಾಜ್ಯ ತಲಾವಾರು ಆದಾಯದಲ್ಲಿ ಇಡೀ ರಾಷ್ಟ್ರದಲ್ಲಿ ಮೂರನೇಯ ಸ್ಥಾನದಲ್ಲಿದೆ. ಆದರೆ ತಲಾವಾರು ಆದಾಯಕ್ಕೆ ಕೇವಲ ಶೇ.30ರಷ್ಟು ಜನ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಇನ್ನೂ ಶೇ.70 ರಷ್ಟು ಜನ ಕೇವಲ ತಮ್ಮ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 70 ಪರ್ಸೆಂಟ್ ಜನ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆರ್ಥಿಕವಾಗಿ ಹಣಕಾಸು ನೆರವು, ಕಾರ್ಯಕ್ರಮ, ಮಾರುಕಟ್ಟೆ ಎಲ್ಲವನ್ನ ಜೋಡಿಸಿ ಅವರ ಆರ್ಥಿಕತೆಯನ್ನು ಸ್ವಲ್ಪ ಮೇಲೆತ್ತಬೇಕು ಎನ್ನುವುದು ನನ್ನ ಗುರಿಯಾಗಿದೆ.ಇದರಿಂದ ಅವರ ಆದಾಯ ಜಾಸ್ತಿಯಾದರೆ ಅವರು ಕೂಡ ನಮ್ಮ ಆರ್ಥಿಕ ವಲಯಕ್ಕೆ ಕೊಡುಗೆ ನೀಡಲಿದ್ದಾರೆ. ಹೀಗಾಗಿ ತಲಾವಾರು ಆದಾಯ ಹೆಚ್ಚಾಗಲಿದೆ. ಜಿಡಿಪಿ ಹೆಚ್ಚಲಿದೆ ಎಂದರು.
ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆಗಳಿಗೆ ಕ್ಲಸ್ಟರ್ ಮಾಡಿ ಎಲ್ಲೆಲ್ಲಿ ಸ್ಥಳೀಯವಾಗಿ ಬ್ರ್ಯಾಂಡ್ ಸಿಗಲಿವೆವೋ ಅದಕ್ಕೆ ಉತ್ತೇಜನ ನೀಡುತ್ತೇವೆ. ಅದರಲ್ಲಿ ನೀವು ಭಾಗವಹಿಸಬೇಕು ಹೀಗೆ ಹಲವಾರು ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಮಹಿಳಾ ಸಂಘಗಳಿಗೆ ಸಿಎಂ ಕರೆ ನೀಡಿದರು.
ಇದನ್ನೂ ಓದಿ: 'ಐಕಿಯಾ' ಫರ್ನಿಚರ್ ಮಳಿಗೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಆತ್ಮವಿಶ್ವಾಸದಿಂದ ನೀವು ಮುಂದೆ ಹೋಗಿ ಸರ್ಕಾರ ನಿಮ್ಮ ಜೊತೆ ಇರಲಿದೆ. ಮಹಿಳೆಯರಿಗೆ ಇರುವ ತಾಳ್ಮೆ ಪುರುಷರಲ್ಲಿ ಇರುವುದಿಲ್ಲ. ಹಾಗಾಗಿ ಮಹಿಳೆಯರು ಸಾಧನೆ ಮಾಡಲು ಸಾಧ್ಯವಿದೆ. ಇಂದಿನ ಸಮಾರಂಭಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಂದಿದ್ದು, ನಿಮಗೆಲ್ಲಾ ಶಕ್ತಿ ಬಂದಂತಾಗಿದೆ. ಅದೇ ರೀತಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ 75 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ ಎನ್ನುವುದನ್ನು ಪ್ರಸ್ತಾಪಿಸಿ ಸಂಪುಟ ಸಹೋದ್ಯೋಗಿಯನ್ನು ಕೊಂಡಾಡಿದರು.