ಬೆಂಗಳೂರು : ನಗರದಲ್ಲಿ ಮನೆ ಬಾಡಿಗೆಗೆ ಇದೆ ಅಂತಾ ಮನೆ ಮುಂದೆ ಬೋರ್ಡ್ ಹಾಕುವ ಮುನ್ನ ಎಚ್ಚರ. ಬಾಡಿಗೆ ಮನೆ ಕೇಳುವ ನೆಪದಲ್ಲಿ ಜನರ ಸುಲಿಗೆ ಮಾಡುವ ಗ್ಯಾಂಗ್ವೊಂದು ಪತ್ತೆಯಾಗಿದೆ. ದೊಡ್ಡ ಮನೆಗಳು, ಮೂರ್ನಾಲ್ಕು ಬಾಡಿಗೆ ಮನೆ ಇರುವ ಕಟ್ಟಡಗಳನ್ನೇ ಗುರಿ ಮಾಡಿಕೊಂಡ ಆರೋಪಿಗಳು ಅಂದರ್ ಆಗಿದ್ದಾರೆ.
ತಬ್ರೇಜ್ ಅಹಮ್ಮದ್, ಸಮೀರ್ ಪಾಷ, ಸಾಧಿಕ್ ಖಾನ್, ಮಹಮ್ಮದ್ ಅದ್ನಾನ್ ಹಾಗೂ ರಫೀಕ್ ಪಾಷ ಎಂಬುವರು ಬಂಧಿತ ಆರೋಪಿಗಳು. ಈ ಗ್ಯಾಂಗ್ನವರು ಮನೆಗಳಲ್ಲಿ ಒಬ್ಬರೇ ವಾಸಿಸುತ್ತಿರುವುದನ್ನು ಅರಿತ ಕೂಡಲೇ ಕೈಚಳಕ ತೋರಿಸುತ್ತಿದ್ದರು.
ನಿತ್ಯ ನಗರದಲ್ಲಿ ತಿರುಗುತ್ತಿದ್ದ ಈ ಗ್ಯಾಂಗ್ ಮನೆಯೊಂದರಲ್ಲಿ ಒಬ್ಬರೇ ಇರುವುದನ್ನು ಪತ್ತೆ ಮಾಡಿಕೊಂಡಿದ್ದರು. ಬಳಿಕ ಒಂದು ದಿನ ಮನೆ ಬಾಡಿಗೆ ಕೇಳಿ, ನಾಳೆ ಪುನಃ ಬರುತ್ತೇವೆ ಅಂತಾ ಹೇಳಿ ವಾಪಸ್ ಹೋಗಿದ್ದರು.
ಆದರೆ, ಮರುದಿನ ಅದೇ ಮನೆಗೆ ಬಂದಿದ್ದ ಆರೋಪಿಗಳು, ಮನೆ ನೋಡುವ ನೆಪದಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಅಷ್ಟೇ ಅಲ್ಲ, ಮನೆಗಳಲ್ಲಿ ಕುಡಿಯುವ ನೀರು ಕೇಳುವ ನೆಪದಲ್ಲೂ ಮಹಿಳೆಯರ ಚಿನ್ನದ ಸರ ಎಗರಿಸಿದ್ದರು. ಈ ಬಗ್ಗೆ ಕುಮಾರಸ್ವಾಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ನಗರದ ಹಲವೆಡೆ ಬೈಕ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸದ್ಯ ಬಂಧಿತರಿಂದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಪೊಲೀಸ್ ಇನ್ಸ್ಪೆಕ್ಟರ್ ಕಾರಿನಲ್ಲೇ ಕಳ್ಳತನ: ಲ್ಯಾಪ್ಟಾಪ್, 50 ಸಾವಿರ ದೋಚಿ ಎಸ್ಕೇಪ್!