ಬೆಂಗಳೂರು: ನಮ್ಮ ಸರ್ಕಾರದಲ್ಲಿ ಕ್ಯಾಸಿನೋ ಜಾರಿ ಬಗ್ಗೆ ಯಾವುದೇ ಚಿಂತನಯೇ ಆಗಿಲ್ಲ. ಅಂತಹ ಪ್ರಸ್ತಾವನೆಯೂ ಇಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಕ್ಯಾಸಿನೋ ಜಾರಿ ಮಾಡುವುದಿಲ್ಲ. ಎಫ್ಕೆಸಿಸಿಐನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂದ ಪ್ರಶ್ನೆಗೆ ಅಲ್ಲೇ ಸ್ಪಷ್ಟಪಡಿಸಿದ್ದೇನೆ. ಬಿಜೆಪಿ ಸರ್ಕಾರ ಕ್ಯಾಸಿನೋ ಪರ ಇಲ್ಲ. ಅನೇಕ ನಾಯಕರು ಕ್ಯಾಸಿನೋ ಪರ ಇದ್ದಾರೆ. ಅವರು ನನ್ನ ಬಳಿ ಸಹಮತವನ್ನೂ ವ್ಯಕ್ತಪಡಿಸಿದ್ದಾರೆ. ಅವರ ಹೆಸರನ್ನು ಹೇಳಿ ಮುಜುಗರ ಮಾಡುವುದಿಲ್ಲ ಎಂದರು.
ನಾವು ವಿಲೇಜ್ ಟೂರಿಸಂ ಸೇರಿದಂತೆ ಹಲವು ಪ್ರವಾಸೋದ್ಯಮದ ಕುರಿತು ಚರ್ಚೆ ನಡೆಸಿದ್ದೇವೆಯೇ ಹೊರತು ರಾಜ್ಯದಲ್ಲಿ ಕ್ಯಾಸಿನೋ ಆರಂಭದ ಬಗ್ಗೆ ಮಾತನಾಡಿಲ್ಲ ಎಂದರು.