ಬೆಂಗಳೂರು : ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಹರೀಶ್ ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳ ಅನ್ವಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆಯು ಗೌರವ ಧನ ಸೇವೆಯಾಗಿದೆ. ಇವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗದು ಎಂದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ. ಆದರೆ, ಇದು ಕೇಂದ್ರದ ಕಾರ್ಯಕ್ರಮ. ಇಡೀ ದೇಶಕ್ಕೆ ಅನ್ವಯವಾಗುವಂತೆ ತೀರ್ಮಾನಗಳು ಆಗಬೇಕು.
ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ. 60ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ. 40ರಷ್ಟು ಪಾಲನ್ನು ರಾಜ್ಯ ಸರ್ಕಾರ ಭರಿಸಿ ಗೌರವ ಧನ ನೀಡುತ್ತಿದೆ ಎಂದರು.
ಓದಿ: ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಪುನರಾರಂಭ ಕಷ್ಟಸಾಧ್ಯ: ಜಗದೀಶ್ ಶೆಟ್ಟರ್
ನ್ಯಾಷನಲ್ ಪೆನ್ಷನ್ ಸಿಸ್ಟಮ್ ಲೈಟ್ (Nps-LITE) ಅಡಿಯಲ್ಲಿ ನೋಂದಾಯಿಸಲಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. 2015ರ ನಂತರ ಸೇವೆಗೆ ಸೇರಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಸೌಲಭ್ಯ ಸಿಗುತ್ತಿಲ್ಲ.
ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವರು ನಿವೃತ್ತಿಯಾದ ನಂತರ 30 ರಿಂದ 80 ಸಾವಿರ ಇಡುಗಂಟು ಸಿಗುವ ಸಂಬಂಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆದಿದೆ ಎಂದರು. ರಾಜ್ಯದಲ್ಲಿ 65,911 ಅಂಗನವಾಡಿ ಕಾರ್ಯಕರ್ತೆಯರು, 65,580 ಸಹಾಯಕಿಯರಿದ್ದಾರೆ. ಇವರೆಲ್ಲರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತಿದೆ ಎಂದ ಸಚಿವರು ತಿಳಿಸಿದರು.