ಬೆಂಗಳೂರು: ಕೊರೊನಾ ಆರಂಭದ ದಿನಗಳಲ್ಲಿದ್ದ ಆತಂಕ, ಸಮಸ್ಯೆ ಈಗ ಇಲ್ಲವಾಗಿದೆ. ಸರ್ಕಾರ ಜನರಲ್ಲಿ ಮನೋಬಲ ತುಂಬುವ ಕಾರ್ಯ ಮಾಡಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಕೊರೊನಾ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಇದು ಜಾಗತಿಕ ಸಮಸ್ಯೆ. ಔಷಧ ಕಂಡು ಹಿಡಿದಿಲ್ಲ. ಬಹುದೊಡ್ಡ ಸಮಸ್ಯೆ ನಾವು ಎದುರಿಸುತ್ತಿದ್ದೇವೆ. ಇದು ನಮ್ಮ ಹಿಡಿತದಲಿಲ್ಲ. ಸರ್ವರ ಪ್ರಯತ್ನದಿಂದ ಅಷ್ಟೋ, ಇಷ್ಟೊ ಸುಧಾರಣೆ ಕಂಡಿದೆ. ಇಡೀ ಜಗತ್ತು ಈ ರೋಗದಿಂದ ತತ್ತರಿಸಿದೆ. ನಮ್ಮ ಸರ್ಕಾರ ಸಮರ್ಥವಾಗಿ ಸಮಸ್ಯೆ ನಿಭಾಯಿಸಿದೆ. ಅವ್ಯವಹಾರ ಆಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಒಂದೊಂದು ಕಡೆ ಬಳಕೆಯಾಗುವ ವೆಂಟಿಲೇಟರ್ ಬೆಲೆ ಒಂದೊಂದು ರೀತಿ ಇದೆ. ನಾವು ತಂದ ಉತ್ಪನ್ನ ಕಳಪೆ ಅಂತ ತಿಳಿದಾಗ ವಾಪಸ್ ಮಾಡಿ, ಬ್ಲ್ಯಾಕ್ ಲಿಸ್ಟ್ಗೆ ಸೇರಿಸಿದ್ದೇವೆ. ಕೇಂದ್ರ ಸರ್ಕಾರ ಸೂಚಿಸಿದ ಸಂಸ್ಥೆಯಿಂದ ಖರೀದಿಸಿದ್ದೇವೆ. ಸರ್ಕಾರ ವಿಶೇಷ ಸಮಿತಿ ರಚಿಸಿ ಖರೀದಿ ಕಾರ್ಯ ಮಾಡಿದ್ದೇವೆ. ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದೇವೆ. ಆರಂಭದಲ್ಲಿದ್ದ ಗೊಂದಲ, ರೋಗದ ಆತಂಕ ಈಗ ಇಲ್ಲ. ಆರಂಭದಲ್ಲಿ ನಮಗೆ ಇದ್ದ ಗೊಂದಲ ಈಗ ಇಲ್ಲವಾಗಿದೆ. ಆರಂಭದಲ್ಲಿ ನಮಗೆ ಅರಿವಿನ ಕೊರತೆಯಿಂದ ಒಂದಿಷ್ಟು ಗೊಂದಲ ಆಗಿರಬಹುದು. ಆದರೆ, ಈಗ ಸರಿ ಹೋಗಿದೆ. ಕೊರೊನಾ ವಾರಿಯರ್ಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ರೋಗ ಆರಂಭದಲ್ಲಿ ಉಂಟಾದ ಸಾವು, ನೋವು ಗೊಂದಲ ನಿವಾರಿಸುವಲ್ಲಿ ಸರ್ಕಾರ ಸಫಲತೆ ಸಾಧಿಸಿದೆ. ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿಲ್ಲ. ಸಿಎಂ ಯಡಿಯೂರಪ್ಪ ವಿಶೇಷ ಕಾಳಜಿ ವಹಿಸಿದ್ದಾರೆ. ತಪ್ಪು ತಿದ್ದಿಕೊಂಡಿದ್ದೇವೆ. ಲೋಪವಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ. ಗುಣಮಟ್ಟದ ಆಹಾರ ನೀಡಿದ್ದೇವೆ. ಜನರ ಜೀವ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಜಿಲ್ಲೆಯ ಭೇಟಿ ಸಂದರ್ಭ ನಾನು ಗೆಸ್ಟ್ ಹೌಸ್ನಲ್ಲಿ ಉಳಿಯದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದಿದ್ದೆ. ವೈದ್ಯರ ಜತೆ ಸಭೆ ನಡೆಸಿದ್ದೇನೆ. ಮೃತಪಟ್ಟವರ ಬಗ್ಗೆ ಸಾಂತ್ವನ ಇದೆ. ಕುಟುಂಬಕ್ಕೆ ಸಾಂತ್ವನ ಸಲ್ಲಿಸಿದ್ದೇವೆ. ಸಾಕಷ್ಟು ಸುಧಾರಣೆ ಆಗಿದೆ ಎಂದರು. ಇನ್ನೂ ಎರಡು ತಿಂಗಳು ವ್ಯಾಕ್ಸಿನ್ ಬರುವವರೆಗೆ ನಾವು ಈ ಪರಿಸ್ಥಿತಿ ಎದುರಿಸುತ್ತಲೇ ಸಾಗಬೇಕಿದೆ. ಕೋವಿಡ್ ಜತೆಯೇ ನಾವು ಬದುಕಬೇಕು. ವ್ಯಾಕ್ಸಿನ್ ಬರುವವರೆಗೂ ಜನ ಮುನ್ನೆಚ್ಚರಿಕೆ, ಜಾಗ್ರತೆ ವಹಿಸಬೇಕಿದೆ ಎಂದರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಚಿವರು ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಆದರೆ, ನಿಯಂತ್ರಣ ವಿಚಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ ವಿವರಿಸುತ್ತಾರೆ ಅಂದುಕೊಂಡಿದ್ದೆ. ವಿದೇಶದಿಂದ ಬಂದವರನ್ನು ಸೂಕ್ತ ರೀತಿಯಲ್ಲಿ ಕ್ವಾರಂಟೈನ್ ಮಾಡಿದ್ದರೆ ಸಮಸ್ಯೆ ಹೀಗಾಗುತ್ತಿರಲಿಲ್ಲ. ಲಾಕ್ಡೌನ್, ಸೀಲ್ಡೌನ್, ವ್ಯಾಪಾರ ವಹಿವಾಟು ನಷ್ಟ ಆಗುತ್ತಿರಲಿಲ್ಲ. ಇಂದು ಸರ್ಕಾರದ ವೈಫಲ್ಯ ಸಮಸ್ಯೆ ಹರಡಲು ಕಾರಣ ಎಂದರು. ರೋಗ ಬಂದ ನಂತರ ನಿಯಂತ್ರಣ ಸಾಧ್ಯವಾಗದಿದ್ದಾಗ ಲಾಕ್ಡೌನ್ ಆಯಿತು. ಆಗಲೂ ಸೂಕ್ತ ಎಚ್ಚರಿಕೆ ಕೈಗೊಳ್ಳದೇ ಸಮಸ್ಯೆ ಹೆಚ್ಚಿಸಿದೆ. ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಸರ್ಕಾರ ಪ್ರಯತ್ನ ಮಾಡಿದೆ. ಆದರೆ, ಅದು ಪರಿಣಾಮಕಾರಿಯಾಗಿಲ್ಲ. ಸಚಿವರ ಉತ್ತರ ಸಮಾಧಾನಕರ, ತೃಪ್ತಿದಾಯಕವಾಗಿಲ್ಲ. ಇದರಿಂದ ನಾವು ಸದನದಿಂದ ಹೊರ ನಡೆಯುತ್ತೇವೆ ಎಂದು ಸಭಾತ್ಯಾಗ ಮಾಡಿದರು.