ಬೆಂಗಳೂರು : ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ಲೆಕ್ಕಾಚಾರಗಳು ಆರಂಭವಾಗಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಸಿಎಂ ಚಂದ್ರಶೇಖರ್ ರಾವ್ ಅವರು ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರು ಇಂದು ದೆಹಲಿಯಲ್ಲಿ ಹಲವು ರಾಜ್ಯಗಳ ಮುಖಂಡರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.
ರಾಷ್ಟ್ರಪತಿ ಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದೆ. ಇದರ ಬೆನ್ನಲ್ಲೇ ತೃತೀಯ ರಂಗದ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಆಂಧ್ರದ ಜಗನ್‍ಮೋಹನ್ ರೆಡ್ಡಿ, ತಮಿಳುನಾಡಿನ ಡಿಎಂಕೆ ಪಕ್ಷದ ಎಂ ಕೆ ಸ್ಟಾಲಿನ್, ಒಡಿಶಾದ ಬಿಜು ಪಟ್ನಾಯಕ್, ಉತ್ತರಪ್ರದೇಶದ ಅಖಿಲೇಶ್ ಯಾದವ್ ಅವರ ನಿರ್ಧಾರಗಳು ಮಹತ್ವ ಪಡೆದಿವೆ.
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತೃತೀಯ ರಂಗದ ಅಭ್ಯರ್ಥಿಯಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಈವರೆಗೂ ತನ್ನ ಅಭ್ಯರ್ಥಿಯ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ಜುಲೈ 18ರಂದು ಮತದಾನ ನಡೆಯಲಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ತೃತೀಯ ರಂಗದ ಕಸರತ್ತು : ಮುಂದಿನ ರಾಷ್ಟ್ರಪತಿ ಆಯ್ಕೆಗೆ ಅಭ್ಯರ್ಥಿಗಳ ಹುಡುಕಾಟ ಚುರುಕುಗೊಂಡಿದೆ. ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಎನ್‍ಸಿಪಿ ನಾಯಕ ಶರದ್ ಪವಾರ್, ಸಿಪಿಎಂನ ಸೀತಾರಾಮ್ ಯೆಚೂರಿ ಅವರ ಜೊತೆ ಅಭ್ಯರ್ಥಿ ಆಯ್ಕೆ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಿದ್ದಾರೆ. ಆದರೆ, ಇಬ್ಬರೂ ನಾಯಕರು ರಾಷ್ಟ್ರಪತಿ ಸ್ಥಾನವನ್ನು ನಿರಾಕರಿಸಿದ್ದಾರೆ. ಹಾಗಾಗಿ, ಇಂದು ಮಮತಾ ಬ್ಯಾನರ್ಜಿಯವರು ಸುಮಾರು 20 ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದಿದ್ದು, ಸುಮಾರು 17 ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.
ಇನ್ನು ಬಿಜೆಪಿ ನೇತೃತ್ವದ ಎನ್‍ಡಿಎ ಶೇ.48ರಷ್ಟು ಮತಗಳನ್ನು ಹೊಂದಿದೆ. ಕಾಂಗ್ರೆಸ್ ಸೇರಿ ಉಳಿದ ಪಕ್ಷಗಳ ಮತಗಳು ಶೇ.52 ಬಲಾಬಲ ಹೊಂದಿವೆ. ಬಿಜೆಪಿ ತನ್ನ ಸಹವರ್ತಿ ಪಕ್ಷಗಳು ಹಾಗೂ ಸೌಹಾರ್ದ ಸಂಬಂಧದ ಮಿತ್ರ ಪಕ್ಷಗಳಾದ ಬಿಹಾರದ ಜೆಡಿಯು, ಆಂಧ್ರಪ್ರದೇಶದ ವೈಎಸ್‍ಆರ್‌ಪಿ, ಒಡಿಶಾದ ಬಿಜೆಡಿ ಸೇರಿದಂತೆ ಹಲವು ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿವೆ.
2017ರ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಒಡಕು ಮೂಡಿದೆ. ಯುಪಿಎ ಅಭ್ಯರ್ಥಿಯಾಗಿದ್ದ ಮೀರಾ ಕುಮಾರಿ ಸೋಲು ಕಂಡಿದ್ದರು. ಅದಕ್ಕಾಗಿ ಈ ಬಾರಿ ಅಭ್ಯರ್ಥಿ ಆಯ್ಕೆ ಸಂಬಂಧ ಆರಂಭದಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮಾಲೋಚನೆಗೆ ಇಳಿದಿದ್ದಾರೆ. ಕಾಂಗ್ರೆಸ್ ಜೊತೆ ತೃಣಮೂಲ ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆ ಮತ್ತು ಎಡಪಕ್ಷಗಳ ಜೊತೆ ಚರ್ಚೆ ನಡೆಸಿವೆ.
ದೆಹಲಿ ಹಾಗೂ ಪಂಜಾಬ್‍ನಲ್ಲಿ ಅಧಿಕಾರ ಹಿಡಿದು ಗಮನಾರ್ಹ ಶಾಸಕರನ್ನು ಹೊಂದಿರುವ ಎಎಪಿ ಪಾತ್ರ ಕೂಡ ಈ ಬಾರಿ ಪ್ರಮುಖವಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತೃತೀಯ ರಂಗ ಬಲಗೊಳ್ಳುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಒಂದು ವೇಳೆ ಯುಪಿಎ ಜೊತೆ ಹೊಂದಾಣಿಕೆ ಸಾಧ್ಯವಾಗದೆ ಇದ್ದರೆ ತೃತೀಯ ರಂಗದಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ದೇವೇಗೌಡರ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಖ್ಯಾಬಲವೆಷ್ಟಿದೆ?: ಆಡಳಿತಾರೂಢ ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸೇರಿ ಒಟ್ಟು ಸಂಸತ್ ಸದಸ್ಯರ ಸಂಖ್ಯೆ 772 ರಷ್ಟಿದೆ. ಬಿಜೆಪಿ ಸ್ವಂತವಾಗಿ ಶೇ.42ರಷ್ಟು, ಮೈತ್ರಿ ಪಕ್ಷಗಳು ಶೇ.6ರಷ್ಟು ಸೇರಿ ಶೇ.48ರಷ್ಟು ಮತಗಳನ್ನು ಹೊಂದಿವೆ. ಕಾಂಗ್ರೆಸ್ ಸ್ವಂತ ಶೇ.13.5ರಷ್ಟು ಸೇರಿ ಯುಪಿಎ ಶೇ.24ರಷ್ಟು ಸಂಖ್ಯಾಬಲವನ್ನು ಹೊಂದಿದೆ. ಯುಪಿಎ ಜೊತೆ ಡಿಎಂಕೆ, ಶಿವಸೇನೆ, ಎನ್‍ಸಿಪಿ, ಜೆಎಂಎಂ ಸೇರಿ ಹಲವು ಸಣ್ಣ ಪಕ್ಷಗಳು ಒಗ್ಗೂಡಿವೆ. ಮುಸ್ಲಿಂಲೀಗ್, ವಿಸಿಕೆ, ಆರ್‌ಎಸ್‍ಪಿ ಮತ್ತು ಎಂಡಿಎಂಕೆ ಒಟ್ಟುಗೂಡಿದರೆ ಶೇ.10.5ರಷ್ಟು ಸಂಖ್ಯಾಬಲವಾಗಲಿದೆ.
ತೃಣಮೂಲ ಕಾಂಗ್ರೆಸ್ ಶೇ.5.4ರಷ್ಟು, ವೈಎಸ್‍ಆರ್‌ಪಿ ಶೇ.4ರಷ್ಟು, ಬಿಜೆಪಿ ಶೇ.2.85ರಷ್ಟು, ಎಡ ಪಕ್ಷಗಳು ಶೇ.2.5ರಷ್ಟು ಸೇರಿ ಶೇ.12ರಷ್ಟು ಮತಗಳ ಕೂಟ ಹೊಂದಿದೆ. ಪ್ರತಿ ಸಂಸದರ ಒಂದು ಮತ 700 ಅಂಕವೆಂದು ಲೆಕ್ಕ ಹಾಕಲಾಗುತ್ತದೆ. ಒಟ್ಟು ಸಂಸದರ ಮತಗಳ ಅಂಕಗಳು 5,43,200, ಶಾಸಕರ ಮತಗಳು 5,43,231 ಸೇರಿ ಒಟ್ಟು 10,86,431 ಅಂಕಗಳೆಂದು ಲೆಕ್ಕಚಾರ ಹಾಕಲಾಗುತ್ತದೆ.
ಓದಿ : ನಾಳೆಯಿಂದ ಸಿಇಟಿ: ಗ್ಯಾಜೆಟ್ ತರುವಂತಿಲ್ಲ-ತಲೆ, ಕಿವಿ ಮುಚ್ಚುವ ಬಟ್ಟೆ ಧರಿಸುವಂತಿಲ್ಲ