ಬೆಂಗಳೂರು: ಸರ್ಕಾರದ ಬೊಕ್ಕಸ ಖಾಲಿಯಾಗಿಲ್ಲ. ಖಜಾನೆಯಲ್ಲಿ ಯಥೇಚ್ಛ ಹಣ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಅತಿವೃಷ್ಠಿ ಮತ್ತು ಅನಾವೃಷ್ಠಿ ಕುರಿತಂತೆ ನಡೆದ ಚರ್ಚೆಯಲ್ಲಿ ವಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 22 ಜಿಲ್ಲೆಗಳ 103 ತಾಲೂಕಿನ 2,798 ಹಳ್ಳಿಗಳು ನೆರೆ ಪೀಡಿತವಾಗಿವೆ. ಮಳೆ ಹಾನಿಯಿಂದ ತೊಂದರೆಗೀಡಾದ ಜನರ ನೆರೆವಿಗೆ ಸುಮಾರು 2,800 ಕೋಟಿ ರೂ. ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲಿ ಆರ್ಟಿಜಿಎಸ್ ಮೂಲಕ ಹಣ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ 792 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ.1.09 ಲಕ್ಷ ತೋಟಗಾರಿಕಾ ಬೆಳೆ,1,06,25 ಹೆಕ್ಟೇರ್ ಕಾಫಿ ಬೆಳೆ ಹಾನಿ, 244.45 ಹೆಕ್ಟೇರ್ ರೇಷ್ಮೆ ಬೆಳೆ ಹಾನಿ, ರಾಜ್ಯ ಮತ್ತು ಜಿಲ್ಲಾ 4119 ಕಿ ಮೀ. ಹೆದ್ದಾರಿ,ಗ್ರಾಮೀಣ ರಸ್ತೆಗಳ 16,921 ಕಿ.ಮೀ, ನಗರದ 2,778 ಕಿ.ಮೀ ಹಾಗೂ 2,913 ಸೇತುವೆಗಳು ಹಾನಿಯಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ನೆರೆ ಸಂತ್ರಸ್ತರಿಗಾಗಿ ಗುಣಮಟ್ಟದ ಆಹಾರ ನೀಡಲಾಗಿದ್ದು, 4415 ವೈದ್ಯಕೀಯ ಶಿಬಿರದಲ್ಲಿ 10,326 ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದಿಂದ 2,69,000 ಆಹಾರ ಕಿಟ್‌ಗಳನ್ನ ಸಂತ್ರಸ್ತರಿಗೆ ಹಂಚಲಾಗಿದೆ. ಮಲೆನಾಡು ಪ್ರದೇಶಗಳಲ್ಲಿಯೂ ಪರಿಹಾರವನ್ನು ವಿತರಿಸಲಾಗಿದೆ. ಸಂತ್ರಸ್ತರಿಗೆ ಪ್ರತಿ ತಿಂಗಳು 5,000 ರೂ.ನಂತೆ 10 ತಿಂಗಳಿನ 50 ಸಾವಿರ ರೂ. ನೆರೆವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ನೆರೆಗೆ 3,400 ಜಾನುವಾರು ಅಸುನೀಗಿದ್ದು, 30,000 ರು.ನಂತೆ ಜಾನುವಾರು ಕಳಕೊಂಡವರಿಗೆ 617 ಲಕ್ಷ ರೂ. ಅನುದಾನ ನೀಡಿದ್ದೇವೆ. ಇನ್ನು, ನೆರೆಗೆ 20,189 ಹೆಕ್ಟೇರ್ ಮಣ್ಣು ಕೊಚ್ಚಿಹೋಗಿದ್ದು, ಅವರಿಗೆ ಪ್ರತಿ ಹೆಕ್ಟೇರ್ಗೆ 12,220 ರು ಕೊಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದವರಿಗೆ ಬದಲಿ ಕಂದಾಯ ಭೂಮಿ ಕೊಡಲು ತೀರ್ಮಾನಿಸಲಾಗಿದೆ. ಇನ್ನು, ಮಾರ್ಕ್ಸ್ ಕಾರ್ಡ್ ಕಳೆದು ಹೋದವರಿಗೆ ತುರ್ತಾಗಿ ಹೊಸ ಮಾರ್ಕ್ಸ್ ಕಾರ್ಡ್ ಕೊಡಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಬರ ಸಂಬಂಧ ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಸದ್ಯಕ್ಕೆ 49 ತಾಲೂಕು ಬರಪೀಡಿತ ಎಂದು ಗುರುತಿಸಿದ್ದು, ಮೂರ್ನಾಲ್ಕು ದಿನಗಳಲ್ಲಿ ಆದೇಶ ಹೊರಡಿಸಲಿದ್ದೇವೆ ಎಂದು ತಿಳಿಸಿದರು.