ಬೆಂಗಳೂರು : ಎಟಿಎಂಗೆ ಹಣ ತುಂಬಿಸುವಾಗ ಬಂದ ಮಹಿಳೆಗೆ ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದ ಭದ್ರತಾ ಸಿಬ್ಬಂದಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಭದ್ರತಾ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಘಟನೆ ಮಂಗಳವಾರ ಸಂಜೆ ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. 64 ವರ್ಷದ ಖಾಸಗಿ ಸೆಕ್ಯುರಿಟಿ ಏಜೆನ್ಸಿಯ ಭದ್ರತಾ ಸಿಬ್ಬಂದಿ ನೀಡಿರುವ ದೂರಿನನ್ವಯ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ಮಲ್ಲೇಶ್ವರಂನ ಗಣೇಶ ದೇವಸ್ಥಾನದ ಎದುರಿಗಿರುವ ಎಟಿಎಂ ಒಂದಕ್ಕೆ ಹಣ ತುಂಬಿಸಲಾಗುತ್ತಿತ್ತು. ಈ ವೇಳೆ ಎಟಿಎಂ ಬಾಗಿಲ ಬಳಿ ಬಂದ ಮಹಿಳೆಗೆ ಆಂಟಿ ಪಕ್ಕಕ್ಕೆ ಸರಿಯಿರಿ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದರು. ಆದರೆ ಸಿಟ್ಟಿಗೆದ್ದ ಮಹಿಳೆ ‘ನನ್ನನ್ನೇ ಆಂಟಿ ಎನ್ನುತ್ತೀಯಾ?’ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ತಾವು ಧರಿಸಿದ್ದ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಸಾರ್ವಜನಿಕರು ಆರೋಪಿ ಮಹಿಳೆಯಿಂದ ನನ್ನನ್ನು ಬಿಡಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನೊಂದ ಭದ್ರತಾ ಸಿಬ್ಬಂದಿ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ ಆರೋಪ... ನಾಲ್ವರ ಬಂಧನ