ಬೆಂಗಳೂರು : ದೇಶದಲ್ಲಿ ವಿಧ್ವಂಸಕ್ಕೆ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಡಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಇತ್ತೀಚೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿ ವಿಚಾರಣೆ ನಡೆಸಿದೆ. ಪರಿಣಾಮ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಯಿಂದ ಯುವಕರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುವ ಕೆಲಸಕ್ಕೆ ಕೈ ಹಾಕಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಆರ್ಥಿಕವಾಗಿ ದುರ್ಬಲ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿರುವ ಯುವ ಸಮೂಹವನ್ನೇ ನಿರ್ದಿಷ್ಟ ಸಮುದಾಯಕ್ಕೆ ಮತಾಂತರ ಮಾಡಿಸಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಐಸಿಸ್ ಸಂಘಟನೆ ಸಂಚು ರೂಪಿಸಿತ್ತು. ಐಸಿಸ್ ಜೊತೆ ಸೋಷಿಯಲ್ ಮೀಡಿಯಾ ಹಾಗೂ ಆ್ಯಪ್ನಲ್ಲಿ ಸಕ್ರಿಯವಾಗಿ ಉಗ್ರರೊಂದಿಗೆ ಚಾಟ್ ಮಾಡುತ್ತಿದ್ದ ಆರೋಪದಡಿ ಮಂಗಳೂರು ಹಾಗೂ ಬೆಂಗಳೂರಿನ ಕಡೆಗಳಲ್ಲಿ ಇತ್ತೀಚೆಗೆ ದಾಳಿ ನಡೆಸಿ ನಾಲ್ವರನ್ನು ಎನ್ಐಎ ಬಂಧಿಸಿತ್ತು.
ತಮಿಳುನಾಡು ಮೂಲದ ಬೆಂಗಳೂರಿನ ಹೂಡಿ ನಿವಾಸಿ ಮಾದೇಶ್ ಪೆರುಮಾಳ್ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನನ್ನು ಎನ್ಐಎ ತೀವ್ರ ವಿಚಾರಣೆಗೊಳಪಡಿಸಿದಾಗ ಬೇರೆ ಧರ್ಮಕ್ಕೆ ಮತಾಂತರವಾಗಿ ಮಾವೀಯಾ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊತ್ತಾಗಿದೆ. ಸಂಘಟನೆ ತತ್ವ ಸಿದ್ಧಾಂತ ಹಾಗೂ ಕೆಲ ಆಮಿಷವೊಡ್ಡಿ ಮಹಿಳೆಯರ ಮೂಲಕ ಮತಾಂತರ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಅನ್ಯ ಧರ್ಮಕ್ಕೆ ಮತಾಂತರ : ಇತ್ತೀಚೆಗೆ ಅಫ್ಘಾನಿಸ್ತಾನದ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್-ಕೊರಸನ್ ಪ್ರೀವೆನ್ಸಿ (ಐಎಸ್-ಕೆಪಿ) ಸಂಘಟನೆ ಸೇರಲು ಮಾದೇಶ್ ಮುಂದಾಗಿದ್ದ. ಇದಕ್ಕೂ ಮುನ್ನ ಮಂಗಳೂರು ಮೂಲದ ಮಹಿಳೆ ನಿರ್ದಿಷ್ಟ ಸಮುದಾಯಕ್ಕೆ ಮತಾಂತರಗೊಂಡಿದ್ದಳು. ಈಕೆಯಿಂದ ಸ್ಫೂರ್ತಿ ಪಡೆದು ಮಾದೇಶ್ ಅನ್ಯ ಧರ್ಮಕ್ಕೆ ಮತಾಂತರ ಆಗಿದ್ದ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಮೂಲದ ಮಾದೇಶ್ ಪೆರುಮಾಳ್ ಪಿಯುಸಿ ಅನುತ್ತೀರ್ಣಗೊಂಡು ಮನೆಯಲ್ಲೇ ಇರುತ್ತಿದ್ದ. ಕೆಲ ವರ್ಷಗಳ ಹಿಂದೆ ಆತನ ತಾಯಿ, ಗಂಡ ಮತ್ತು ಮಗನನ್ನು ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ. ಈ ನಡುವೆ ಆತನ ತಂದೆ ಕ್ರಿಶ್ಚಿಯನ್ ಧರ್ಮದ ಮಹಿಳೆಯನ್ನು 2ನೇ ಮದುವೆಯಾಗಿದ್ದರು. ಆದರೆ, ತಂದೆ ಮತ್ತು ಮಲತಾಯಿ, ಮಾದೇಶ್ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಅದೇ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು.
ಯಾರೊಂದಿಗೂ ಬೆರೆಯುತ್ತಿರಲಿಲ್ಲ : ಈ ಘಟನೆಗಳಿಂದ ಮಾನಸಿಕವಾಗಿ ನೊಂದಿದ್ದ ಮಾದೇಶ್, ಸ್ನೇಹಿತರು, ಸಂಬಂಧಿಕರು ಸೇರಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಹೀಗಾಗಿ, ಆನ್‌ಲೈನ್ ಮೊರೆ ಹೋಗಿದ್ದ. ಯಾವಾಗಲೂ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ.
ಈ ಮಧ್ಯೆ ಐಸಿಸ್ ಸಂಘಟನೆ ಸದಸ್ಯರ ಕೆಲ ಸಾಮಾಜಿಕ ಜಾಲತಾಣ ಖಾತೆಗಳಿಗೆ ಕುತೂಹಲಕ್ಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಚಂದಾದಾರನಾಗಿದ್ದ. ಆ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದೆ. ಬಳಿಕ ಅವರೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಓದಿ: ಆನಂದ್ ಸಿಂಗ್ ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ.. ಕಂದಾಯ ಸಚಿವ ಆರ್ ಅಶೋಕ್