ಬೆಂಗಳೂರು: ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತದ ಬದ್ಧತೆಗೆ ಅಗತ್ಯ ಕೊಡುಗೆ ನೀಡುವುದು ದೇಶದ ಇಂಗಾಲ ಮಾರುಕಟ್ಟೆಯ ಗುರಿಯಾಗಬೇಕು ಎಂದು ಸ್ಟ್ರಿಂಗ್ ಬಯೋ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಜಿಲ್ ಸುಬ್ಬಿಯಾನ್ ಹೇಳಿದರು.
![ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ನಡೆದ ವಿಚಾರಗೋಷ್ಠಿ](https://etvbharatimages.akamaized.net/etvbharat/prod-images/29-11-2023/kn-bng-07-bts-corban-discuss-script-7208080_29112023184905_2911f_1701263945_928.jpg)
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬೆಂಗಳೂರು ಟೆಕ್ ಸಮ್ಮಿಟ್) ನಿಮಿತ್ತ ಇಂದು ನಡೆದ ʼಪಳೆಯುಳಿಕೆ ಇಂಗಾಲ ಮುಕ್ತ ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನʼ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, 2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೇಕಡ 45ರಷ್ಟು ಕಡಿಮೆ ಮಾಡುವುದು ಹಾಗೂ ಪಳೆಯುಳಿಕೇತರ ಇಂಧನ ಸಾಮರ್ಥ್ಯವನ್ನು ಶೇಕಡ 50ರಷ್ಟು ಹೆಚ್ಚಿಸುವುದು ದೇಶದ ಬದ್ಧತೆಯಾಗಿದೆ ಎಂದರು.
ಇಂಗಾಲ ಹೊರಸೂಸುವಿಕೆಯಲ್ಲಿ ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಪಾಲು ನಗಣ್ಯವಾಗಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡ 18ರಷ್ಟು ಪಾಲು ಹೊಂದಿರುವ ಭಾರತ, ಇಂಗಾಲಾಮ್ಲ ಹೊರಸೂಸುವಿಕೆಯಲ್ಲಿ ಕೇವಲ ಶೇ.7ರಷ್ಟು ಪಾಲು ಹೊಂದಿದೆ. ಇದಲ್ಲದೇ ಇಂಗಾಲಾಮ್ಲ ಪ್ರಮಾಣ ಕಡಿಮೆ ಮಾಡುವ ಜಾಗತಿಕ ಒಡಂಬಡಿಕೆಗಳ ಗುರಿ ಸಾಧನೆ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳು ಆಶಾದಾಯಕವಾಗಿವೆ ಎಂದು ವಿವರಿಸಿದರು.
ʼಜಿಪಿಎಸ್ ರಿನ್ಯೂವಬಲ್ʼ ಸಂಸ್ಥೆಯ ಉಪಾಧ್ಯಕ್ಷ ಗೋಮತಮ್ ರವಿ, ಭೂಗ್ರಹದ ಭವಿಷ್ಯದ ದೃಷ್ಟಿಯಿಂದ ಸುಸ್ಥಿರ ಉದ್ಯಮ ಅಭಿವೃದ್ಧಿ, ಬಯೋಗ್ಯಾಸ್ ಘಟಕಗಳ ನಿರ್ಮಾಣ ತಮ್ಮ ಸಂಸ್ಥೆಯ ಗುರಿಯಾಗಿದೆ ಎಂದರು. ಮುಂದಿನ ಎರಡು - ಮೂರು ವರ್ಷಗಳಲ್ಲಿ ಲಕ್ಷಾಂತರ ಟನ್ ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಹಲವು ಸಂಶೋಧನೆ ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.
ʼರಿಲಯನ್ಸ್ ಸಂಸ್ಥೆಯ ಪ್ರತಿನಿಧಿ ಡಾ.ಮಾನಸಿ ವೋರಾ, 2035ರ ವೇಳೆಗೆ ಒಟ್ಟಾರೆ ರಿಲಯನ್ಸ್ ಸಂಸ್ಥೆಯ ಉದ್ಯಮಗಳಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ 3 ವರ್ಷಗಳಲ್ಲಿ ನವೀನ ಇಂಧನ ಉದ್ಯಮಗಳಲ್ಲಿನ ಅವಕಾಶ ಅನ್ವೇಷಣೆಗಾಗಿ 9 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. ಸೌರಶಕ್ತಿ, ಇಂಧನ ಸ್ಟೋರೇಜ್ ಬ್ಯಾಟರಿ, ಹೈಡ್ರೋಜನ್ ಎಲೆಕ್ಟ್ರೊಲೈಸೆರ್ಸ್, ಫ್ಯೂಯೆಲ್ ಸೆಲ್ಸ್, ಪವರ್ ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ 5 ಗಿಗಾವ್ಯಾಟ್ ಇಂಧನ ಉತ್ಪಾದನೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಲಾನ್ಸಾಟೆಕ್ʼ ಸಂಸ್ಥೆಯ ನಿರ್ದೇಶಕಿ ಡಾ. ಪ್ರೀತಿ ಜೈನ್, ಜೀವ ಜಗತ್ತಿನಲ್ಲಿ ಯಾವುದೂ ತ್ಯಾಜ್ಯವಲ್ಲ. ತ್ಯಾಜ್ಯವನ್ನು ಮೌಲ್ಯ ಎಂದು ಪರಿಗಣಿಸಿ, ಮರುಬಳಕೆ ಮಾಡುವುದು ಅತ್ಯಗತ್ಯ ಎಂದರು. ತಮ್ಮ ಸಂಸ್ಥೆಯು 2025ರಲ್ಲಿ ವಾರ್ಷಿಕ 60 ಸಾವಿರ ಟನ್ ಗಳಷ್ಟು ಎಥೆನಾಲ್ ಉತ್ಪಾದಿಸುವ ಬದ್ಧತೆ ಹೊಂದಿದೆ. ಇಂಗಾಲಾಮ್ಲ ಹೊರಸೂಸುವಿಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜಗತ್ತಿನ ಉದ್ಯಮ ವಲಯ ಪರಸ್ಪರ ಕೈಜೋಡಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಆಸ್ಟ್ರೇಲಿಯಾದ ಪರ್ತ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ʼವುಡ್ ಸೈಡ್ ಎನರ್ಜಿʼ ಸಂಸ್ಥೆಯ ಪ್ರತಿನಿಧಿ ಡಾ.ಜಿತೇಂದ್ರ ಜೋಶಿ, ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ತೈಲ ಮತ್ತು ಅನಿಲ ಉದ್ಯಮ ಸಂಸ್ಥೆಗಳು ಬದಲಾವಣೆಗೆ ತೆರೆದುಕೊಳ್ಳಬೇಕು, ಜೈವಿಕ ತಂತ್ರಜ್ಞಾನ ಉದ್ಯಮ ಇನ್ನಷ್ಟು ಪಾರದರ್ಶಕವಾಗಬೇಕು; ತೈಲ ಮತ್ತು ಅನಿಲ ಹಾಗೂ ಜೈವಿಕ ತಂತ್ರಜ್ಞಾನ ಉದ್ಯಮಗಳ ನಡುವೆ ಬಾಂಧವ್ಯ ಮತ್ತಷ್ಟು ನಿಕಟವಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ