ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯುವ ನ್ಯಾಷನಲ್ ಕಾಲೇಜು ಮೈದಾನದ ಸಿದ್ಧತೆಯನ್ನು ಕಾಂಗ್ರೆಸ್ ನಾಯಕರು ಪರಿಶೀಲಿಸಿದರು.
ಕಾಂಗ್ರೆಸ್ ಪಕ್ಷ ಎರಡನೇ ಹಂತದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ನಾಳೆ ಆರಂಭವಾಗಲಿದ್ದು, ಐದು ದಿನ ನಡೆಯಲಿದೆ. ಮಾ.3ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನೆರವೇರಲಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಒಂದು ನಡೆಯುವ ಸಮಾರೋಪ ಸಮಾರಂಭದ ಸಿದ್ಧತೆ ಪರಿಶೀಲನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಸಂಸದ ಡಿಕೆ ಸುರೇಶ್ ವೀಕ್ಷಿಸಿದರು.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರು ನಾಗರಿಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೇಕೆದಾಟುವಿನಿಂದ ರಾಮನಗರದವರೆಗೆ ಪಾದಯಾತ್ರೆ ಮಾಡಿದ್ದೆವು. ಈ ಮಧ್ಯೆ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯ, ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಲು ಈ ಪಾದಯಾತ್ರೆ ನಿಲ್ಲಿಸಿದ್ದೆವು. ಎಲ್ಲಿ ನಿಲ್ಲಿಸಿದ್ದೇವೋ ಈಗ ಅಲ್ಲಿಂದ ಮತ್ತೆ ಆರಂಭಿಸುತ್ತಿದ್ದೇವೆ ಎಂದರು.
ಪಕ್ಷಾತೀತ ಹೋರಾಟ: ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಎಲ್ಲ ಅಪಾರ್ಟ್ಮೆಂಟ್ ಸಂಘಗಳು, ಕಾರ್ಮಿಕ, ಕೈಗಾರಿಕಾ ಸಂಘಟನೆ, ಎನ್ಜಿಒ, ಚಿತ್ರರಂಗದ ಎಲ್ಲ ವಿಭಾಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದೆ. ಮಾರ್ಚ್ 3 ರಂದು ಮಧ್ಯಾಹ್ನ ಪಾದಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದ್ದು, ಸಭೆ ನಡೆಯಲಿದೆ ಎಂದರು.
ಧರ್ಮಸ್ಥಳದಲ್ಲಿ ದಲಿತ ಸಮುದಾಯದ ಕಾರ್ಮಿಕನನ್ನು ಭಜರಂಗ ದಳದ ಕಾರ್ಯಕರ್ತರು ಹತ್ಯೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ಹತ್ಯೆಯನ್ನು ಭಜರಂಗ ದಳದವರಾದರೂ ಮಾಡಲಿ ಕಾಂಗ್ರೆಸ್ ನವರಾದರೂ ಮಾಡಲಿ ಗೃಹ ಸಚಿವರು, ಪೊಲೀಸರು ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಪ್ರಕರಣ ಹಾಗೂ ಈ ಪ್ರಕರಣದಲ್ಲಿ ಹತ್ಯೆಗೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು. ಇದು ಪೊಲೀಸರ ಕರ್ತವ್ಯ. ಅವರು ಅದನ್ನು ಮಾಡಲಿ' ಎಂದು ಆಗ್ರಹಿಸಿದರು.
ಉಕ್ರೇನ್ನಲ್ಲಿ ಸಿಲುಕಿರುವವರನ್ನು ಶೀಘ್ರವಾಗಿ ಕರೆ ತನ್ನಿ: 'ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಂದು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು, ದಕ್ಷಿಣ ಏಷ್ಯಾದಲ್ಲಿ ಅತೀವೇಗವಾಗಿ ಬೆಳೆಯುತ್ತಿರುವ ನಗರ. ಈ ನಗರಕ್ಕೆ 2050ರ ವೇಳೆಗೆ ಕುಡಿಯುವ ನೀರು ಅಭಾವ ತಲೆದೋರಲಿದೆ. ಕಾವೇರಿ ಏಳನೇ ಹಂತ ಬಂದರೂ 7 ಸಾವಿರ ಅಪಾರ್ಟ್ಮೆಂಟ್ಗಳಿಗೆ ನೀರು ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸದಾ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಜನರ ಪರವಾಗಿ ಹೋರಾಡುತ್ತಿದೆ. ಜನಸಾಮಾನ್ಯರು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಈ ಮೂಲಕ ಕೋರುತ್ತೇನೆ ಎಂದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿನ ನಾಗರೀಕರು, ಭಾರತೀಯರ ರಕ್ಷಣೆ ಮಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೋಗಿದ್ದು, ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದಷ್ಟು ಬೇಗ ಕರೆತಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಗೆ ಈ ಬಾರಿ ಬಜೆಟ್‌ನಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಸಿಎಂ ಬೊಮ್ಮಾಯಿ?