ಬೆಂಗಳೂರು: ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ರೈಲು ಹಾಗೂ ಫ್ಲೈಟ್ ಪ್ರಯಾಣ ಬಹಳ ಕಷ್ಟವಾಗಿದ್ದು, ಪ್ರಯಾಣ ಅವಧಿಯಲ್ಲಿ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಈ ಸಂಬಂಧ ರೈಲಿನಲ್ಲಿ ಪೊಲೀಸರು ಹಾಗೂ ವಿಮಾನದಲ್ಲಿ ಗಗನಸಖಿಯರು ಪ್ರಮುಖ ಜವಾಬ್ದಾರಿ ಹೊತ್ತಿದ್ದು, ಹೆಚ್ಚಿನವರು ಸೋಂಕಿಗೆ ತುತ್ತಾಗುತ್ತಿದ್ದಾರೆ.
ರೈಲ್ವೆ ಪೊಲೀಸರ ಜವಾಬ್ದಾರಿ ಹಾಗೂ ಕೋವಿಡ್ ನಿಯಂತ್ರಣದ ಬಗ್ಗೆ ಈಟಿವಿ ಭಾರತ ಜೊತೆ ಎಡಿಜಿಪಿ ಭಾಸ್ಕರ್ ರಾವ್ ಮಾತನಾಡಿದ್ದು, 1,000ಕ್ಕೂ ಹೆಚ್ಚಿನ ಸಿಬ್ಬಂದಿ ರೈಲ್ವೆ ನಿಲ್ದಾಣಕ್ಕೆ ಭದ್ರತೆ ನೀಡುತ್ತಿದ್ದಾರೆ. ಹಾಗೂ ಮಹಾರಾಷ್ಟ್ರ ಮತ್ತು ಇನ್ನಿತರ ಹೆಚ್ಚಿನ ರಾಜ್ಯಗಳಿಂದ ಬರುವ ರೈಲ್ವೆ ಪ್ರಯಾಣಿಕರ ಕೋವಿಡ್ ನಿಯಮ ಪಾಲನೆ, ನೆಗೆಟಿವ್ ವರದಿ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎಂದರು.
ಒಬ್ಬ ರೈಲ್ವೆ ಪೊಲೀಸ್ ನಿತ್ಯ 600 ರಿಂದ 700 ಜನರ ಜೊತೆ ಸಂವಹನ ನಡೆಸುತ್ತಾರೆ. ರೈಲ್ವೆ ಪೊಲೀಸರು ಭದ್ರತೆ ಒದಗಿಸುವ ಜತೆಗೆ ಸಹಾಯವಾಣಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಎಫ್ಕೆಸಿಸಿಐ ಹಾಗೂ ಇನ್ನಿತರ ಉದ್ಯಮಿಗಳು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ನೀಡುವ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕೋವಿಡ್ -19 : ಮತ್ತೊಮ್ಮೆ ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ
ಒಟ್ಟು 4 ರೈಲ್ವೆ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ರೈಲಿನ ಪ್ರಯಾಣ ಸಂದರ್ಭದಲ್ಲೂ ಇವರು ತಪಾಸಣೆ ನಡೆಸುತ್ತಿದ್ದಾರೆ. ಯಾರಿಂದ ಕೋವಿಡ್ ಬಂದಿದೆ ಎಂದು ತಿಳಿಯುವುದು ಕಷ್ಟ. ಸಂಪರ್ಕಿತರನ್ನು ಐಸೋಲೇಟ್ ಮಾಡಲಾಗಿದೆ ಎಂದರು.