ಬೆಂಗಳೂರು : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್-7 ಮತ್ತೆ ಮರು ಪ್ರಸಾರವಾಗಲಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯು ಇದನ್ನ ಮರು ಪ್ರಸಾರ ಮಾಡಲು ನಿರ್ಧರಿಸಿದೆ. ಏಪ್ರಿಲ್ 6ರಿಂದ ಪ್ರತಿ ದಿನ ಬೆಳಗ್ಗೆ 11ರಿಂದ 12.30ರವರೆಗೆ ಬಿತ್ತರವಾಗಲಿದೆ. 7ನೇ ಸೀಸನ್‌ನ ಎಲ್ಲಾ ಎಪಿಸೋಡ್‌ಗಳು ಪ್ರಸಾರವಾಗಲಿವೆ.
ಈ ಕಾರ್ಯಕ್ರಮಕ್ಕೆ ತನ್ನದೇ ಆದ ಪ್ರೇಕ್ಷಕ ವರ್ಗವಿದೆ. ವಿವಿಧ ಕ್ಷೇತ್ರದಿಂದ ಬಂದ ಸ್ಪರ್ಧಿಗಳ ನಡುವಿನ ಹಣಾಹಣಿ, ಕಿಚ್ಚ ಸುದೀಪ್ ಅವರ ಆಕರ್ಷಕ ನಿರೂಪಣೆ, ಪ್ರತಿವಾರದ ಎಲಿಮಿನೇಷನ್ ಕೌತುಕ, ಮನೆಯೊಳಗಿನ ಸ್ಪರ್ಧಿಗಳ ಮಾತುಕತೆ ಎಲ್ಲವೂ ಇಲ್ಲಿ ಮನರಂಜನೆಯೇ ಆಗಿದೆ. ಹೀಗಾಗಿ, ಬಿಗ್‌ಬಾಸ್ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಲೇ ಬಂದಿದೆ. ಕನ್ನಡದಲ್ಲಿ ಈವರೆಗೂ ಯಶಸ್ವಿಯಾಗಿ 7 ಸೀಸನ್‌ಗಳನ್ನು ಪೂರೈಸಿದೆ.
ಈ ಲಾಕ್‌ಡೌನ್ ಸಮಯದಲ್ಲಿ ಪ್ರೇಕ್ಷಕರಿಗಾಗಿ ಬಿಗ್‌ಬಾಸ್ ಶೋ ಮರು ಪ್ರಸಾರ ಮಾಡಲಾಗುವುದು ಎಂಬ ಮಾಹಿತಿಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ನೀಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 7 ಬೆಸ್ಟ್ ಸೀಸನ್ ಎಂದು ಖ್ಯಾತಿ ಪಡೆದಿದೆ.
ರವಿ ಬೆಳಗೆರೆ, ರಾಜು ತಾಳಿಕೋಟೆ, ಶೈನ್ ಶೆಟ್ಟಿ, ಚಂದನಾ ಅನಂತಕೃಷ್ಣ, ಚೈತ್ರಾ ಕೋಟೂರ್, ಚಂದನ್ ಆಚಾರ್, ಚೈತ್ರಾ ವಾಸುದೇವನ್, ಭೂಮಿ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್, ಕುರಿ ಪ್ರತಾಪ್, ಸುಜಾತಾ, ದೀಪಿಕಾ ದಾಸ್, ಕಿಶನ್ ಬಿಳಗಲಿ, ಪ್ರಿಯಾಂಕಾ, ದುನಿಯಾ ರಶ್ಮಿ, ಜೈಜಗದೀಶ್ ಈ ಸೀಸನ್ ಸ್ಪರ್ಧಿಗಳಾಗಿದ್ದರು. ಇದೀಗ 7ನೇ ಸೀಸನ್ ಮರು ಪ್ರಸಾರ ಮಾಡಲು ವಾಹಿನಿ ತೀರ್ಮಾನಿಸಿದೆ.